ಕನ್ನಡದನ್ನಡದ ಅಜರ ಅಮರ ತಾರೆ ಬಿ.ಸರೋಜಾದೇವಿಗೆ ಮರಣೋತ್ತರ ಕರ್ನಾಟಕ ರತ್ನ – ರಾಜ್ಯ ಸರ್ಕಾರದ ದೊಡ್ಡ ನಿರ್ಧಾರ!


ರಾಜ್ಯ ಕ್ಯಾಬಿನೆಟ್ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಕನ್ನಡ ಚಿತ್ರರಂಗದ ಹೆಮ್ಮೆಯ ನಟಿ, ಪಂಚಭಾಷಾ ತಾರೆ ದಿವಂಗತ ಬಿ.ಸರೋಜಾದೇವಿ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪುರಸ್ಕಾರ ನೀಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಇತ್ತೀಚೆಗೆ ಬಿ.ಸರೋಜಾದೇವಿ ಅವರು ಬೆಂಗಳೂರು ಮಲ್ಲೇಶ್ವರದಲ್ಲಿ ವಿಧಿವಶರಾಗಿದ್ದರು. ಬಳಿಕ ಅವರ ಸ್ವಂತ ಊರಾದ ಚನ್ನಪಟ್ಟಣ ತಾಲ್ಲೂಕಿನ ದಶಾವರ ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವೆಂದು ಅಭಿಮಾನಿಗಳು, ಚಿತ್ರರಂಗದ ಗಣ್ಯರು, ಹಾಗೂ ರಾಜಕೀಯ ನಾಯಕರು ಭಾವುಕರಾಗಿದ್ದರು.
ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ, ಬಿ.ಸರೋಜಾದೇವಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ನೀಡಲು ಅಂತಿಮ ಒಪ್ಪಿಗೆ ದೊರೆತಿದೆ. ಇದೇ ಸಭೆಯಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರಿಗೂ ಮರಣೋತ್ತರವಾಗಿ ಕರ್ನಾಟಕ ರತ್ನ ನೀಡಲು ಸರ್ಕಾರ ನಿರ್ಧರಿಸಿದೆ.
ಬಿ.ಸರೋಜಾದೇವಿ ಅವರು ಕನ್ನಡ ಚಿತ್ರರಂಗದ ಅತೀ ದೊಡ್ಡ ಐಕಾನ್. ಅವರು ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಚಿತ್ರಗಳಲ್ಲಿಯೂ ತಮ್ಮ ನಟನೆಯಿಂದ ಮಿಂಚಿ, “ಪಂಚಭಾಷಾ ತಾರೆ” ಎಂಬ ಬಿರುದನ್ನು ಪಡೆದಿದ್ದರು.
ಕನ್ನಡದ ಅನೇಕ ಗಣ್ಯರು ಹಾಗೂ ಅಭಿಮಾನಿಗಳು, ಅವರ ನಟನಾ ಸಾಧನೆ ಹಾಗೂ ಸಿನಿರಂಗದ ಕೊಡುಗೆಗಳನ್ನು ಪರಿಗಣಿಸಿ, ರಾಜ್ಯ ಸರ್ಕಾರಕ್ಕೆ ಕರ್ನಾಟಕ ರತ್ನ ನೀಡಬೇಕೆಂದು ಆಗ್ರಹಿಸಿದ್ದರು. ಕೊನೆಗೆ ಸರ್ಕಾರ ಈ ಮನವಿಗೆ ಮನ್ನಣೆ ನೀಡಿದೆ.
ಬಿ.ಸರೋಜಾದೇವಿ ಅವರು ಕನ್ನಡದ ಅನೇಕ ಶಾಶ್ವತ ಚಲನಚಿತ್ರಗಳ ನಾಯಕಿ. ನಟ ರಾಜ್ ಕುಮಾರ್, ಎನ್.ಟಿ.ಆರ್, ಎಂ.ಜಿ.ಆರ್, ಶಿವಾಜಿ ಗಣೇಶನ್ ಮೊದಲಾದ ದಿಗ್ಗಜರೊಂದಿಗೆ ನಟಿಸಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದ್ದರು. ಅವರು ಪಡೆದಿದ್ದ ಯಶಸ್ಸು, ಕನ್ನಡ ಚಿತ್ರರಂಗಕ್ಕೆ ತಂದುಕೊಟ್ಟ ಹೆಗ್ಗಳಿಕೆ, ಹಾಗೂ ಭಾರತೀಯ ಚಿತ್ರರಂಗದ ಮಟ್ಟದಲ್ಲಿ ತಂದ ಮೆರಗು ಇವೆಲ್ಲವೂ ಅವರಿಗೊಂದು ಅಪಾರ ಗೌರವ ತಂದುಕೊಟ್ಟಿವೆ.
ಈಗ ದಿವಂಗತ ಬಿ.ಸರೋಜಾದೇವಿ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ದೊರೆತಿರುವುದು, ಅಭಿಮಾನಿಗಳಿಗೆ ಹಾಗೂ ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಚಾರ. ಕನ್ನಡದ ಸುವರ್ಣಯುಗವನ್ನು ಹೊತ್ತೊಯ್ದ ಈ ಮಹಾನ್ ನಟಿಗೆ ರಾಜ್ಯದ ಪರಮ ಗೌರವ ಸಿಕ್ಕಿರುವುದು ನಿಜಕ್ಕೂ ಸ್ಮರಣೀಯ ಕ್ಷಣ.