ಚಿತ್ರರಂಗದಲ್ಲಿ ಬೆಚ್ಚಿಬೀಳುವ ಪ್ರಕರಣ – ನಟ ಧ್ರುವ ಸರ್ಜಾ ವಿರುದ್ಧ ವಂಚನೆ ಆರೋಪ


ಸಂದರ್ಭಕ್ಕೆ ಸೂಪರ್ ಹಿಟ್ ಸಿನಿಮಾಗಳ ಮೂಲಕ ಜನಮನ ಗೆದ್ದ ನಟ ಧ್ರುವ ಸರ್ಜಾ, ಈಗ ಗಂಭೀರ ಆರೋಪಕ್ಕೆ ಸಿಲುಕಿದ್ದಾರೆ. ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ, ನಿರ್ದೇಶಕ ರಾಘವೇಂದ್ರ ಹೆಗ್ಡೆ ನೀಡಿದ ದೂರಿನ ಆಧಾರದ ಮೇಲೆ ಧ್ರುವ ಸರ್ಜಾ ವಿರುದ್ಧ ವಂಚನೆ ಆರೋಪದಡಿ FIR ದಾಖಲಾಗಿದೆ.
ದೂರುದಾರರಾದ ರಾಘವೇಂದ್ರ ಹೆಗ್ಡೆ ಅವರ ಪ್ರಕಾರ, 2018ರಿಂದ 2021ರ ಅವಧಿಯಲ್ಲಿ ಧ್ರುವ ಸರ್ಜಾ ಅವರೇ ಅವರನ್ನು ಸಂಪರ್ಕಿಸಿ ಸಿನಿಮಾ ಮಾಡುವ ಮಾತು ನೀಡಿ, ‘ಸೋಲ್ಜರ್’ ಎಂಬ ಚಿತ್ರದ ಸ್ಕ್ರಿಪ್ಟ್ ಹಂಚಿಕೊಂಡಿದ್ದರು. ಒಪ್ಪಂದಕ್ಕೆ ಸಹಿ ಹಾಕುವ ಮೊದಲು, ಧ್ರುವ ಅವರು 3.15 ಕೋಟಿ ರೂಪಾಯಿ ಮುಂಗಡವಾಗಿ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ರಾಘವೇಂದ್ರ ಹೆಗ್ಡೆಯವರ ಆರೋಪದ ಪ್ರಕಾರ, ಅವರು ಹೆಚ್ಚಿನ ಬಡ್ಡಿಗೆ 3.15 ಕೋಟಿ ರೂಪಾಯಿ ಸಾಲ ಪಡೆದು, ಧ್ರುವ ಸರ್ಜಾ ಒಡೆತನದ RH ಎಂಟರ್‌ಟೈನ್ಮೆಂಟ್ ಕಂಪನಿಗೆ ಹಣ ವರ್ಗಾವಣೆ ಮಾಡಿದ್ದಾರೆ. ಆದರೆ, ಧ್ರುವ ಸರ್ಜಾ ಯಾವುದೇ ಚಿತ್ರ ಶೂಟಿಂಗ್ ಆರಂಭಿಸದೇ, ಆ ಹಣದಿಂದ ಅಪಾರ್ಟ್ಮೆಂಟ್ ಖರೀದಿ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ದೂರು ಪ್ರಕಾರ, ಧ್ರುವ ಸರ್ಜಾ ಅವರು ಹಣ ಪಡೆದ ನಂತರ ತಮ್ಮ ನಟನೆಯ ಬದ್ಧತೆಗಳನ್ನು ಪೂರೈಸುವಲ್ಲಿ ವಿಳಂಬ ಮಾಡಿದ್ದು, ಯಾವುದೇ ಚಿತ್ರಕ್ಕೆ ಹಾಜರಾಗಲಿಲ್ಲ. ಇದರಿಂದ ನಿರ್ದೇಶಕರಿಗೆ ಆರ್ಥಿಕ ನಷ್ಟ ಉಂಟಾಗಿದೆ.
ಈ ಪ್ರಕರಣ ಇದೀಗ ಸಿನಿಮಾ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅಭಿಮಾನಿಗಳು ಹಾಗೂ ಉದ್ಯಮದಲ್ಲಿ ತೀವ್ರ ಕುತೂಹಲ ಉಂಟುಮಾಡಿದೆ. ಧ್ರುವ ಸರ್ಜಾ ಅವರಿಂದ ಈ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಇನ್ನೂ ಬಂದಿಲ್ಲ.