ಮಜಾ ಭಾರತ ಜೋಡಿ ಮದುವೆ ಆಗ್ತಾರೆ ಅನ್ನೋ ಮಾತಿಗೆ ಮಾನಸಾ ಹೇಳಿದ್ದೇನು? ಇಲ್ಲಿದೆ ಸತ್ಯ...


ಕನ್ನಡ ಕಿರುತೆರೆಯ ಜನಪ್ರಿಯ ಜೋಡಿ ರಾಘವೇಂದ್ರ ಮತ್ತು ಮಾನಸಾ ಕುರಿತಾಗಿ ಇತ್ತೀಚೆಗೆ ಒಂದು ಗಾಸಿಪ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. “ಇವರಿಬ್ಬರು ಮದುವೆಯಾಗುತ್ತಿದ್ದಾರೆ, ಇಡೀ ಕರ್ನಾಟಕಕ್ಕೆ ಬಾಡೂಟ ಹಾಕಿಸ್ತೀವಿ” ಎಂಬ ವಂದತಿ ಅಭಿಮಾನಿಗಳ ಮಧ್ಯೆ ಚರ್ಚೆಗೆ ಗ್ರಾಸವಾಗಿತ್ತು.
ರಾಘವೇಂದ್ರ, ಮಜಾ ಭಾರತ ಮತ್ತು ಗಿಚ್ಚಿ ಗಿಲಿಗಿಲಿ ಶೋಗಳ ಮೂಲಕ ಪ್ರಖ್ಯಾತಿ ಪಡೆದ ಕಲಾವಿದ. ‘ರಾಗಿಣಿ’ ಎಂಬ ಹೆಸರಿನ ಮೂಲಕ ಹೆಚ್ಚು ಜನಪ್ರಿಯರಾಗಿದ್ದ ಅವರು, ತಮ್ಮ ಹಾಸ್ಯಭರಿತ ಅಭಿನಯದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಮಾನಸಾ ಕೂಡಾ ತಮ್ಮ ಅಭಿನಯ ಹಾಗೂ ಪರದೆಯ ಮೇಲಿನ ನೈಸರ್ಗಿಕ ಹಾಸ್ಯದಿಂದ ಕಿರುತೆರೆಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಜೋಡಿ ಹಲವು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಾ, ಸೋಷಿಯಲ್ ಮೀಡಿಯಾದಲ್ಲಿ ಜೋಡಿಯಾಗಿ ರೀಲ್ಸ್ ಮಾಡುವ ಮೂಲಕ ಮತ್ತಷ್ಟು ಜನಮನ ಗೆದ್ದಿದ್ದಾರೆ. ಇದರಿಂದಾಗಿ ಅಭಿಮಾನಿಗಳು ಇವರನ್ನು ನಿಜ ಜೀವನದಲ್ಲಿಯೂ ಜೋಡಿಯೆಂದು ಭಾವಿಸಲು ಆರಂಭಿಸಿದರು. ಇದೇ ಹಿನ್ನೆಲೆ, ಮದುವೆ ಕುರಿತ ವದಂತಿ ಹುಟ್ಟಿಕೊಂಡಿತು.
ಆದರೆ, ಈ ವಿಚಾರಕ್ಕೆ ಮಾನಸಾ ನೇರವಾಗಿ ಸ್ಪಷ್ಟನೆ ನೀಡಿದರು. ಅವರು, “ನನ್ನ ಮತ್ತು ರಾಘು ಬಗ್ಗೆ ಗಾಳಿ ಸುದ್ದಿ ಹಬ್ಬಿದೆ. ನಾವಿಬ್ಬರು ಮದುವೆಯಾಗುತ್ತೇವೆ, ಇಡೀ ಕರ್ನಾಟಕಕ್ಕೆ ಬಾಡೂಟ ಹಾಕಿಸ್ತೀವಿ ಅಂತ ಹೇಳಿದ್ದಾರೆ. ಅದು ಸಂಪೂರ್ಣ ಸುಳ್ಳು. ನಾವಿಬ್ಬರು ಅಕ್ಕ-ತಮ್ಮ. ಹಲವು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಮತ್ತು ಒಬ್ಬರಿಗೊಬ್ಬರು ಸದಾ ಬೆಂಬಲ ನೀಡುತ್ತೇವೆ” ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಹಾಸ್ಯಭರಿತವಾಗಿ “ಬಾಡೂಟ ಹಾಕಿಸ್ತೀವಿ ಎಂದು ಹೇಳಿದವರು ಹಾಕಿಸಬೇಕು” ಎಂದು ಟೀಕಿಸಿದರು.
ಈ ಸ್ಪಷ್ಟನೆಯ ನಂತರ ಅಭಿಮಾನಿಗಳಲ್ಲಿ ಗಾಸಿಪ್‌ಗೆ ಬ್ರೇಕ್ ಬಿದ್ದಿದೆ. ಆದರೆ, ರಾಘವೇಂದ್ರ ಮತ್ತು ಮಾನಸಾ ಅವರ ಸ್ನೇಹದ ಬಾಂಧವ್ಯ ಹಾಗೆಯೇ ಮುಂದುವರಿಯಲಿದೆ ಎಂಬ ವಿಶ್ವಾಸ ಅಭಿಮಾನಿಗಳಲ್ಲಿ ಮೂಡಿದೆ.