‘ಕರಾವಳಿ’ ಸಿನಿಮಾದಲ್ಲಿ ಮಹಾವೀರನಾದ ರಾಜ್ ಬಿ ಶೆಟ್ಟಿ – ಟೀಸರ್ ಮೂಲಕ ಭಾರಿ ಸದ್ದು!


ಕರ್ನಾಟಕದ ಕರಾವಳಿ ನಾಡಿನ ಸಾಂಸ್ಕೃತಿಕ ಹಿನ್ನಲೆಯಲ್ಲಿ ಸಜ್ಜುಗೊಂಡಿರುವ ಬಹು ನಿರೀಕ್ಷಿತ ಸಿನಿಮಾ ‘ಕರಾವಳಿ’ ಇದೀಗ ಹೊಸ ಟೀಸರ್ ಮೂಲಕ ಮತ್ತೊಂದು ಗಮನ ಸೆಳೆಯುವ ಕೆಲಸ ಮಾಡಿದೆ. ಈ ಬಾರಿ ಟೀಸರ್ ಮೂಲಕ ಮಹಾವೀರನಾಗಿ ರಾಜ್ ಬಿ ಶೆಟ್ಟಿ ಅವರ ಪವರ್‌ಫುಲ್ ಎಂಟ್ರಿ ಸಿನಿಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಜ್ವಲ್ ದೇವರಾಜ್ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ‘ಕರಾವಳಿ’ ಚಿತ್ರವನ್ನು ಗುರುದತ್ ಗಣಿಗ ಭಿನ್ನ ಹಾಗೂ ವಿಭಿನ್ನ ರೀತಿಯಲ್ಲಿ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಡುಗಡೆಗೊಂಡ ಪೋಸ್ಟರ್‌ಗಳು ಮತ್ತು ಟೀಸರ್‌ಗಳು ಈ ಚಿತ್ರದ ಬೇರೆಯಾದ ಹಂದರದ ಬಗ್ಗೆ ಸೂಚನೆ ನೀಡುತ್ತಿವೆ.
ಇತ್ತೀಚಿಗೆ ಬಿಡುಗಡೆಗೊಂಡ ಟೀಸರ್‌ನಲ್ಲಿ ರಾಜ್ ಬಿ ಶೆಟ್ಟಿ ‘ಮಹಾವೀರ’ ಎಂಬ ಶಕ್ತಿಶಾಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದಿನ ಚಿತ್ರಗಳಲ್ಲಿ ತಮ್ಮ ಸಿಗ್ನೇಚರ್ ಲುಕ್‌ನಾದ ಬೊಕ್ಕ ತಲೆಯಿಂದ ವಿಭಿನ್ನವಾಗಿ, ಈ ಚಿತ್ರದಲ್ಲಿ ತಲೆಯಲ್ಲಿ ಕೂದಲಿರುವ ಹೊಸ ಲುಕ್‌ನ್ನು ಅವರು ಪ್ರದರ್ಶಿಸಿದ್ದಾರೆ. ಕಂಬಳದ ಕೋಣಗಳ ನಡುವೆ ನಿಂತು ನೋಡುವ ರಾಜ್ ಬಿ ಶೆಟ್ಟಿ ಅವರ ಭಾವನಾತ್ಮಕ ನೋಟ, ಪಾತ್ರದ ತೀವ್ರತೆಯನ್ನು ವ್ಯಕ್ತಪಡಿಸುತ್ತದೆ. ಟೀಸರ್‌ನ ಹಿನ್ನೆಲೆ ಧ್ವನಿಯಲ್ಲಿ ಮಿತ್ರ ಪಾತ್ರ ‘ಸಾಯುವ ಮೊದಲು ರಥಬೀದಿಯಲ್ಲಿ ಕಂಬಳದ ಕೋಣಗಳ ಮೆರವಣಿಗೆ ಆಗಬೇಕು’ ಎಂದು ಮನವಿ ಮಾಡುತ್ತಿರುವ ದ್ರಷ್ಟಾಂತ, ಚಿತ್ರದ ಭಾವನಾತ್ಮಕ ಅಂಶವನ್ನು ಬಿಂಬಿಸುತ್ತದೆ.
ಚಿತ್ರದ ಪಾತ್ರಗಳಲ್ಲಿ ಪ್ರಜ್ವಲ್ ದೇವರಾಜ್, ಮಿತ್ರ, ರಮೇಶ್ ಇಂದಿರಾ ಸೇರಿದಂತೆ ಹಲವು ಪ್ರಮುಖರು ಇದ್ದು, ನಾಯಕಿಯಾಗಿ ಸ್ಪಂದನ ಹುಲಿವನ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಸಂಗೀತ ನೀಡಿರುವವರು ಸಚಿನ್ ಬಾಸ್ರೂರು ಹಾಗೂ ಛಾಯಾಗ್ರಹಣದ ಹೊಣೆ ಹೊತ್ತಿರುವವರು ಅಭಿಮನ್ಯು ಸದಾನಂದ.
‘ಕರಾವಳಿ’ ಸಿನಿಮಾ ಕಂಬಳ, ಅಸಮಾನತೆ, ಪ್ರೇಮಕಥೆ, ಕ್ರೈಂ ಥ್ರಿಲ್ಲರ್, ಸಂಸ್ಕೃತಿಯ ಸಂಘರ್ಷ ಇವೆಲ್ಲವನ್ನೂ ಒಟ್ಟುಗೂಡಿಸಿ ಒಬ್ಬ ವಿಭಿನ್ನ ಕಥಾನಕದ ಮೂಲಕ ಪ್ರೇಕ್ಷಕರ ಹೃದಯ ಗೆಲ್ಲಲು ಸಜ್ಜಾಗಿದೆ.