ಹೈಕೋರ್ಟ್ ಭರವಸೆ ಮುರಿದ ಸುಪ್ರೀಂ ಕೋರ್ಟ್ – ಜಾಮೀನು ರದ್ದಾದ ಕ್ಷಣವೇ ಕಣ್ಣೀರಿಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ!


ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಹಾಗೂ ಅವರ ಗ್ಯಾಂಗ್‌ಗೆ ಸಿಕ್ಕಿದ್ದ ಜಾಮೀನು ಇಂದು ಸುಪ್ರೀಂ ಕೋರ್ಟ್ ತೀರ್ಪಿನಿಂದ ರದ್ದುಗೊಂಡಿದೆ. ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನಿಗೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗೆ ಅನುಗುಣವಾಗಿ, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮಹಾದೇವನ್ ಅವರ ಪೀಠ ತೀರ್ಪು ನೀಡಿದೆ. ಇದರ ಪರಿಣಾಮವಾಗಿ ದರ್ಶನ್ ಸೇರಿ 7 ಪ್ರಮುಖ ಆರೋಪಿಗಳು ಮತ್ತೆ ಜೈಲಿನ ಚಳಿಗೋಡೆಗಳ ಹಿಂದೆ ಕೂರಬೇಕಾಗಿದೆ.
ತೀರ್ಪು ಹೊರಬೀಳುತ್ತಿದ್ದಂತೆಯೇ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರು ತಮ್ಮ ಹೊಸಕೆರೆಹಳ್ಳಿ ಅಪಾರ್ಟ್‌ಮೆಂಟ್ ನಲ್ಲಿ ಇದ್ದಾಗ ಈ ತೀರ್ಪಿನ ಸುದ್ದಿ ತಲುಪಿದೆ. ದರ್ಶನ್ ಪ್ರಕರಣದಲ್ಲಿ ಸಿಲುಕಿದ್ದಾಗಿನಿಂದಲೂ ವಿಜಯಲಕ್ಷ್ಮಿ ತಮ್ಮ ಪತಿಯನ್ನು ರಕ್ಷಿಸಲು ನಿರಂತರ ಪ್ರಯತ್ನ ಮಾಡುತ್ತಿದ್ದರು. ಕಾನೂನು ಹೋರಾಟದ ಜೊತೆಗೆ ದೇವರ ಸೇವೆ, ಧಾರ್ಮಿಕ ವಿಧಿ-ವಿಧಾನಗಳು ಸೇರಿದಂತೆ ಎಲ್ಲ ಮಾರ್ಗಗಳನ್ನು ಪ್ರಯೋಗಿಸಿದ್ದರು.
ಹೈಕೋರ್ಟ್ ಜಾಮೀನು ನೀಡಿದ್ದಾಗ ವಿಜಯಲಕ್ಷ್ಮಿ ನಿಟ್ಟುಸಿರು ಬಿಟ್ಟಿದ್ದರೂ, ಇಂದು ಸುಪ್ರೀಂ ಕೋರ್ಟ್ ತೀರ್ಪು ಅವರ ಭಾವನೆಗಳಿಗೆ ದೊಡ್ಡ ಹೊಡೆತ ನೀಡಿದೆ. ತೀರ್ಪು ಹೊರಬಿದ್ದ ಕೆಲವೇ ಕ್ಷಣಗಳಲ್ಲಿ ಬೆಂಗಳೂರು ಮತ್ತು ಚಿತ್ರದುರ್ಗ ಸೇರಿ 7 ಮಂದಿ ಆರೋಪಿಗಳ ಬಂಧನ ಪ್ರಕ್ರಿಯೆ ಪ್ರಾರಂಭವಾಗಿದೆ. ಬೆಂಗಳೂರಿನಲ್ಲಿ 5 ಜನ, ಚಿತ್ರದುರ್ಗದಲ್ಲಿ 2 ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತರನ್ನು ಮೊದಲು ಪೊಲೀಸ್ ಠಾಣೆಗೆ, ನಂತರ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗುತ್ತದೆ. ನಂತರ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸುವ ಯೋಜನೆ ಇದೆ.
ಈ ತೀರ್ಪು ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ಕಾನೂನಿನ ಮೇಲಿನ ನಂಬಿಕೆ ಬಲಪಡಿಸಿದೆ ಎಂಬ ಅಭಿಪ್ರಾಯ ಕಾನೂನು ವಲಯದಿಂದ ವ್ಯಕ್ತವಾಗಿದೆ. ರಾಜ್ಯ ಸರ್ಕಾರದ ದೃಢ ನಿಲುವು, ಮೇಲ್ಮನವಿಯ ಯಶಸ್ಸಿಗೆ ಕಾರಣವಾಗಿದ್ದು, ಇದು ಮುಂದಿನ ವಿಚಾರಣೆಯ ದಿಕ್ಕು ನಿರ್ಧರಿಸುವ ಮಹತ್ವದ ಹಂತವಾಗಬಹುದು.