‘ಕಮಲ್ ಹಾಸನ್ ಕತ್ತು ಕತ್ತರಿಸುತ್ತೇವೆ’ – ಹಿಂದೂ ಧರ್ಮದ ಬಗ್ಗೆ ಹೇಳಿಕೆ, ಕಮಲ್ ಹಾಸನ್ಗೆ ಕೊಲೆ ಬೆದರಿಕೆ


ಸಿನಿಮಾ ಲೋಕದ ಮೇರುನಟ, ನಿರ್ದೇಶಕ ಹಾಗೂ ರಾಜಕೀಯ ನಾಯಕನಾಗಿ ಹೆಸರಾಗಿರುವ ಕಮಲ್ ಹಾಸನ್ ಇತ್ತೀಚೆಗೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸಿನಿಮಾಗಳಿಗಿಂತ ಹೆಚ್ಚಾಗಿ ಅವರ ವಿವಾದಾತ್ಮಕ ಹೇಳಿಕೆಗಳು ಇದೀಗ ಚರ್ಚೆಯ ಕೇಂದ್ರಬಿಂದುವಾಗಿವೆ. ಹಿಂದೂ ಧರ್ಮ, ವಿಶೇಷವಾಗಿ ಸನಾತನ ಧರ್ಮ ಕುರಿತು ನೀಡಿದ ಹೇಳಿಕೆಯು ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಇದೀಗ ಅವರಿಗೆ ಕೊಲೆ ಬೆದರಿಕೆ ಕೂಡ ಬಂದಿದೆ.
ಕೆಲ ದಿನಗಳ ಹಿಂದೆ ನಟ ಸೂರ್ಯ ಅವರ ಅಗರಂ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಮಲ್ ಹಾಸನ್, ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡಿದರು. ಈ ವೇಳೆ ಅವರು, “ಈಗ ಯುದ್ಧ ನಡೆಯುತ್ತಿದೆ. ಈ ಯುದ್ಧವನ್ನು ಕೇವಲ ಶಿಕ್ಷಣದಿಂದ ಮಾತ್ರವೇ ಗೆಲ್ಲಬಹುದು. ಸರಪಳಿಗಳನ್ನು ಒಡೆಯುವ ಆಯುಧ ಶಿಕ್ಷಣವೇ. ಸರ್ವಾಧಿಕಾರಿ ಹಾಗೂ ಸನಾತನವನ್ನು ಸೋಲಿಸುವ ಶಕ್ತಿ ಶಿಕ್ಷಣಕ್ಕಷ್ಟೇ ಇದೆ.” ಎಂದು ಹೇಳಿಕೆ ನೀಡಿದರು. ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ವೈರಲ್ ಆಗಿ, ಹಲವು ಹಿಂದೂ ಸಂಘಟನೆಗಳು ಮತ್ತು ರಾಜಕೀಯ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡು ಬಿಜೆಪಿ ನಾಯಕರು ಕಮಲ್ ಹಾಸನ್ ಹೇಳಿಕೆಯನ್ನು ಹಿಂದೂ ವಿರೋಧಿ ಎಂದು ಕಟುವಾಗಿ ಟೀಕಿಸಿದರು. ಅವರ ಸಿನಿಮಾಗಳನ್ನು ತಮಿಳುನಾಡಿನಲ್ಲಿ ಬಿಡುಗಡೆಗೊಳಿಸಬಾರದು ಎಂಬ ಒತ್ತಾಯವನ್ನು ಮುಂದಿಟ್ಟರು. ವಿವಾದದ ಮಧ್ಯೆ, ತಮಿಳು ಟಿವಿ ನಟ ರವಿಚಂದ್ರನ್ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ, ಕಮಲ್ ಹಾಸನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, “ಕಮಲ್ ಹಾಸನ್ ಕತ್ತು ಕತ್ತರಿಸುತ್ತೇವೆ” ಎಂದು ಹೇಳಿಕೆ ನೀಡಿದರು. ಇದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡಿತು. ಕಮಲ್ ಹಾಸನ್ ಅವರ ಮಕ್ಕಳ್ ನಿಧಿ ಮಯಂ ಪಕ್ಷದ ಕಾರ್ಯಕರ್ತರು ಈ ಹೇಳಿಕೆಯ ವಿರುದ್ಧ ಚೆನ್ನೈ ಪೊಲೀಸರಿಗೆ ದೂರು ಸಲ್ಲಿಸಿ ತಕ್ಷಣ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಕಮಲ್ ಹಾಸನ್‌ಗೆ ವಿವಾದಗಳು ಹೊಸದಲ್ಲ. ಥಗ್ ಲೈಫ್ ಚಿತ್ರದ ಪ್ರಚಾರ ವೇಳೆ ಕನ್ನಡ ಭಾಷೆ ಕುರಿತು ಮಾಡಿದ ಹೇಳಿಕೆ ಕರ್ನಾಟಕದಲ್ಲಿ ಪ್ರತಿಭಟನೆಯನ್ನು ಹುಟ್ಟುಹಾಕಿತ್ತು. 2019ರಲ್ಲಿ ಚುನಾವಣಾ ಪ್ರಚಾರದಲ್ಲಿ, “ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದೂ ಆಗಿದ್ದ” ಎಂದು ನೀಡಿದ ಹೇಳಿಕೆಯು ರಾಷ್ಟ್ರೀಯ ಮಟ್ಟದಲ್ಲಿ ವಿವಾದ ಎಬ್ಬಿಸಿತ್ತು.
‘ತೇವರ್ ಮಗನ್’, ‘ಹೇ ರಾಮ್’ ಮೊದಲಾದ ಸಿನಿಮಾಗಳೂ ಕೂಡ ಹಿಂದಿನಲ್ಲಿ ಧಾರ್ಮಿಕ ಮತ್ತು ರಾಜಕೀಯ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದ್ದವು. ಕಮಲ್ ಹಾಸನ್ ಅವರ ಹೇಳಿಕೆಗಳು ಸಾಮಾಜಿಕ-ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗುತ್ತಿವೆ. ಈ ಬಾರಿ, ಸನಾತನ ಧರ್ಮ ಕುರಿತ ಟೀಕೆ ಮಾತ್ರವಲ್ಲದೆ, ಕೊಲೆ ಬೆದರಿಕೆ ತನಕ ಪ್ರಕರಣ ತಲುಪಿರುವುದರಿಂದ ಪರಿಸ್ಥಿತಿ ಗಂಭೀರವಾಗಿದೆ. ಇದೀಗ ಪೊಲೀಸರು ಹೇಗೆ ಕ್ರಮ ಕೈಗೊಳ್ಳುತ್ತಾರೆ ಮತ್ತು ಕಮಲ್ ಹಾಸನ್ ಮುಂದೆ ಏನು ಪ್ರತಿಕ್ರಿಯೆ ನೀಡುತ್ತಾರೆ ಎಂಬುದರ ಮೇಲೆ ಎಲ್ಲರ ಗಮನ ನೆಟ್ಟಿದೆ.