ಹಳದಿ ಮೆಟ್ರೋದಲ್ಲೂ ಅಪರ್ಣಾ ಧ್ವನಿ – ಅಭಿಮಾನಿಗಳಿಗೆ ಆನಂದದ ಕ್ಷಣ


ಬೆಂಗಳೂರು ನಗರ ಮೆಟ್ರೋ ಪ್ರಯಾಣಿಕರಿಗೆ ಒಂದು ವಿಶೇಷ ಸಂತಸದ ಸುದ್ದಿ. ಹಸಿರು ಮತ್ತು ಪರ್ಪಲ್ ಮಾರ್ಗಗಳಲ್ಲಿ ತಮ್ಮ ಸುಮಧುರ ಧ್ವನಿಯಿಂದ ಪ್ರಯಾಣಿಕರ ಮನ ಗೆದ್ದಿದ್ದ ನಟಿ, ನಿರೂಪಕಿ ಅಪರ್ಣಾ ಅವರ ಧ್ವನಿ ಈಗ ಹೊಸದಾಗಿ ಉದ್ಘಾಟನೆಯಾದ ಹಳದಿ ಮೆಟ್ರೋ ಮಾರ್ಗದಲ್ಲೂ ಪ್ರತಿಧ್ವನಿಸಲಿದೆ.
ಅಪರ್ಣಾ ಅವರು ಕನ್ನಡಿಗರ ಹೃದಯದಲ್ಲಿ ಸದಾ ನೆನಪಿನಲ್ಲಿರುವ ವ್ಯಕ್ತಿ. ನಟನೆಯಿಂದ ನಿರೂಪಣೆವರೆಗೆ ಹಲವು ಕ್ಷೇತ್ರಗಳಲ್ಲಿ ಮೆಚ್ಚುಗೆ ಪಡೆದಿದ್ದ ಅವರು, ಕಳೆದ ವರ್ಷ ಜುಲೈನಲ್ಲಿ ಕ್ಯಾನ್ಸರ್‌ನಿಂದ ನಿಧನ ಹೊಂದಿದರು. ಆದರೆ, ತಮ್ಮ ಕೊನೆಯ ದಿನಗಳಲ್ಲಿಯೇ ಅವರು ಹಳದಿ ಮಾರ್ಗದ ಮೆಟ್ರೋ ಪ್ರಕಟಣೆಗಳಿಗೆ ಧ್ವನಿ ನೀಡುವ ಮಹತ್ತರ ಕಾರ್ಯವನ್ನು ನೆರವೇರಿಸಿದರು.
2024ರ ಏಪ್ರಿಲ್-ಮೇ ತಿಂಗಳಲ್ಲಿ, ಮೆಟ್ರೋ ತಾಂತ್ರಿಕ ತಂಡ ಅಪರ್ಣಾ ಅವರನ್ನು ಭೇಟಿಯಾಗಿ ರೆಕಾರ್ಡಿಂಗ್ ನಡೆಸಿತು. ಆರೋಗ್ಯ ಹದಗೆಟ್ಟಿದ್ದರೂ, ತಮ್ಮ ಧ್ವನಿಯಿಂದ ಕನ್ನಡಿಗರ ಆಸೆಯನ್ನು ಈಡೇರಿಸಲು ಅವರು ಹಿಂಜರಿಯಲಿಲ್ಲ. ಅವರ ವೃತ್ತಿಪರತೆ ಮತ್ತು ಕನ್ನಡಿಗರ ಮೇಲಿನ ಪ್ರೀತಿಗೆ ಎಲ್ಲರೂ ಶ್ಲಾಘನೆ ಸಲ್ಲಿಸುತ್ತಿದ್ದಾರೆ.
ಹಳದಿ ಮೆಟ್ರೋ ಮಾರ್ಗವನ್ನು ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರವರೆಗೆ ಒಟ್ಟು 16 ನಿಲ್ದಾಣಗಳನ್ನು ಒಳಗೊಂಡ ಈ ಮಾರ್ಗದಲ್ಲಿ, ಈಗಿನಿಂದಲೇ ಅಪರ್ಣಾ ಧ್ವನಿ ಪ್ರಯಾಣಿಕರಿಗೆ ಮಾರ್ಗದರ್ಶನ ನೀಡಲಿದೆ.
ಇದರೊಂದಿಗೆ, ಹಸಿರು, ಪರ್ಪಲ್ ಮತ್ತು ಹಳದಿ ಮೂರು ಮಾರ್ಗಗಳ ಒಟ್ಟೂ 85 ಮೆಟ್ರೋ ನಿಲ್ದಾಣಗಳಲ್ಲಿ ಅಪರ್ಣಾ ಅವರ ಧ್ವನಿಯೇ ಪ್ರತಿಧ್ವನಿಸುತ್ತಿದ್ದು, ಇದು ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಒಂದು ಅಪರೂಪದ ಅನುಭವವಾಗಿದೆ.
ಅಪರ್ಣಾ ಅವರ ಧ್ವನಿ ಕೇವಲ ಮಾಹಿತಿ ನೀಡುವುದಲ್ಲ, ಅದು ಕನ್ನಡಿಗರ ಮನದಲ್ಲಿ ಒಡನಾಟ, ನೆನಪು ಮತ್ತು ಭಾವನೆಯನ್ನು ಉಂಟುಮಾಡುತ್ತದೆ. ಹೀಗಾಗಿ, ಹಳದಿ ಮಾರ್ಗದಲ್ಲಿ ಅವರ ಧ್ವನಿ ಮೊಳಗುವುದು, ಅಭಿಮಾನಿಗಳಿಗೆ ನಿಜವಾದ ಹೃದಯಸ್ಪರ್ಶಿ ಕ್ಷಣವಾಗಿದೆ.