“ಲವ್ ಈಸ್ ಬ್ಲೈಂಡ್ ಅಂತಾರೆ, ನಾನೂ ಬ್ಲೈಂಡ್ ಆಗಿದ್ದೆ” – ವೈಯಕ್ತಿಕ ಬದುಕು ಬಿಚ್ಚಿಟ್ಟ ಚಂದನ್


ಕನ್ನಡದ ಜನಪ್ರಿಯ ರ್ಯಾಪರ್, ನಟ ಹಾಗೂ ಬಿಗ್ ಬಾಸ್ ಕನ್ನಡ 5 ಸ್ಪರ್ಧಿ ಚಂದನ್ ಶೆಟ್ಟಿ ತಮ್ಮ ವೈಯಕ್ತಿಕ ಜೀವನದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ತಮ್ಮ ಮಾಜಿ ಪತ್ನಿ ನಿವೇದಿತಾ ಗೌಡ ಅವರಿಂದ 2024ರಲ್ಲಿ ಡಿವೋರ್ಸ್ ಪಡೆದ ನಂತರ, ಚಂದನ್ ಶೆಟ್ಟಿ ಈಗ ಹೊಸ ಬದುಕಿನ ಪಾಠಗಳನ್ನು ಕಲಿತಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಪರಿಚಯವಾಗಿ, ಪ್ರೀತಿಯಲ್ಲಿ ಬಿದ್ದಿದ್ದ ಚಂದನ್–ನಿವೇದಿತಾ ಜೋಡಿ, ಜನಪ್ರಿಯತೆಯ ಅಲೆಯಲ್ಲೇ ಮದುವೆಯಾದರು. ಆದರೆ ನಾಲ್ಕು ವರ್ಷಗಳ ದಾಂಪತ್ಯ ಬದುಕು ಹೆಚ್ಚು ಕಾಲ ಉಳಿಯಲಿಲ್ಲ. ಕೊನೆಗೆ, 2024ರಲ್ಲಿ ಅವರು ಬೇರ್ಪಟ್ಟರು. ಚಂದನ್ ಶೆಟ್ಟಿ ಈ ಕುರಿತು ಮಾತನಾಡುತ್ತಾ, “ನಾನು ತುಂಬಾ ಇಷ್ಟಪಟ್ಟು ಮದುವೆಯಾಗಿದ್ದೆ. ಲವ್ ಈಸ್ ಬ್ಲೈಂಡ್ ಅಂತಾರೆ, ನಾನೂ ಹಾಗೆ ಬ್ಲೈಂಡ್ ಆಗಿಬಿಟ್ಟಿದ್ದೆ. ಆಗ ಅದು ಕರೆಕ್ಟ್ ಅನ್ನಿಸಿತು, ಆದರೆ ನಂತರ ವರ್ಕ್ ಆಗಲಿಲ್ಲ” ಎಂದು ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ.
ಡಿವೋರ್ಸ್‌ನಿಂದ ಪಡೆದ ದೊಡ್ಡ ಪಾಠವನ್ನು ಹಂಚಿಕೊಂಡ ಚಂದನ್ ಶೆಟ್ಟಿ, “ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮುಖ್ಯ. ವ್ಯಕ್ತಿಯನ್ನು ಪ್ರೀತಿಸುವುದಕ್ಕಿಂತ ವ್ಯಕ್ತಿತ್ವವನ್ನು ಪ್ರೀತಿಸೋದು ಹೆಚ್ಚು ಒಳ್ಳೆಯದು. ಲುಕ್ಸ್ ಮ್ಯಾಟರ್ ಆಗಲ್ಲ. ಜೀವನದಲ್ಲಿ ಹಿಂಸೆ, ಕಂಟ್ರೋಲ್ ಬೇಡ” ಎಂದು ಹೇಳಿಕೊಂಡಿದ್ದಾರೆ.
ಬಿಗ್ ಬಾಸ್‌ನಿಂದ ಹೊರಬಂದ ನಂತರ, ಅಭಿಮಾನಿಗಳು ಇವರ ಜೋಡಿಯನ್ನು ಕ್ಯೂಟ್ ಕಪಲ್ ಎಂದು ಕೊಂಡಾಡಿದರು. ಆದರೆ ಆ ಪಬ್ಲಿಸಿಟಿಯೇ ಸ್ವಲ್ಪ ಒತ್ತಡ ತಂದಿತೆಂದು ಶೆಟ್ಟಿ ಒಪ್ಪಿಕೊಂಡಿದ್ದಾರೆ. “ಎಲ್ಲಾ ಫ್ರೆಂಡ್ಸ್ ಮದುವೆಯಾಗಿದ್ದರು, ನಾನು ಮಾತ್ರ ಒಂಟಿಯಾಗಿದ್ದೆ. ಆ ಸಮಯದಲ್ಲಿ ಏಕಾಂಗಿ ಭಾವನೆ ಕಾಡುತ್ತಿತ್ತು. ಅಷ್ಟರಲ್ಲಿ ನನ್ನ ಎಕ್ಸ್ ಪಾರ್ಟ್‌ನರ್ ಸ್ವಲ್ಪ ಪ್ರೀತಿ ತೋರಿದರು, ಅದಕ್ಕಾಗಿಯೇ ಅವರ ಹಿಂದೆ ಹೋದೆ” ಎಂದು ಅವರು ತಮ್ಮ ಮನಸ್ಥಿತಿಯನ್ನು ವಿವರಿಸಿದ್ದಾರೆ.
ಡಿವೋರ್ಸ್ ನಂತರ ಜೀವನದ ಬಗ್ಗೆ ಗಂಭೀರ ದೃಷ್ಟಿಕೋನ ಹೊಂದಿದ ಚಂದನ್ ಶೆಟ್ಟಿ, “ನಮ್ಮನ್ನು ಯಾರು ನಿಜವಾಗಿ ಇಷ್ಟಪಡುತ್ತಾರೆ, ಅವರಿಗೆ ನಾವು ಪ್ರಯಾರಿಟಿ ಕೊಡಬೇಕು. ಎಲ್ಲವನ್ನು ಕಳೆದುಕೊಂಡ ಸಮಯದಲ್ಲಿ ನನಗೆ ಇದು ಅರಿವಾಯಿತು” ಎಂದು ಹೇಳಿದ್ದಾರೆ. ಚಂದನ್ ಶೆಟ್ಟಿ ತಮ್ಮ ವೈಯಕ್ತಿಕ ಅನುಭವಗಳ ಮೂಲಕ ನೀಡಿದ ಈ ಸಂದೇಶ, ಇಂದಿನ ಪೀಳಿಗೆಯವರಿಗೆ ದೊಡ್ಡ ಪಾಠವಾಗಿದೆ. ಪ್ರೀತಿಯಲ್ಲಿ ಕೇವಲ ಸೌಂದರ್ಯವಲ್ಲ, ವ್ಯಕ್ತಿತ್ವವೇ ಮುಖ್ಯ ಎಂಬ ಅರಿವು ಅವರ ಬದುಕಿನಿಂದಲೇ ಹೊರಹೊಮ್ಮಿದೆ.
“ಒಂದೇ ಹುಟ್ಟು, ಒಂದೇ ಸಾವು. ಇದರ ಮಧ್ಯದಲ್ಲಿ ಮತ್ತೊಬ್ಬರನ್ನು ಹಿಂಸೆ ಕೊಡಬಾರದು” ಎಂಬ ಚಂದನ್ ಶೆಟ್ಟಿಯ ಮಾತು, ಸಂಬಂಧಗಳ ಬಗ್ಗೆ ಎಲ್ಲರನ್ನೂ ಚಿಂತನೆಗೆ ದೂಡುತ್ತದೆ.