210 ಕೋಟಿ ಕ್ಲಬ್‌ನಲ್ಲಿ ‘ಮಹಾವತಾರ್ ನರಸಿಂಹ’; 500 ಕೋಟಿಗೂ ಓಟ ಶುರು!


ಭಾರತೀಯ ಸಿನೆಮಾ ಇತಿಹಾಸದಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿರುವ 'ಮಹಾವತಾರ್ ನರಸಿಂಹ' ಈಗ ದೇಶದ ಅತ್ಯಂತ ಯಶಸ್ವಿ ಅನಿಮೇಟೆಡ್ ಚಿತ್ರವೆಂಬ ಹೆಗ್ಗಳಿಕೆಯನ್ನು ಗಳಿಸಿದೆ. ಬಿಡುಗಡೆಯಾಗಿ ಕೇವಲ ಅರ್ಧ ತಿಂಗಳಾದರೂ, ಚಿತ್ರವು ವಿಶ್ವಾದ್ಯಂತ 210 ಕೋಟಿಗೂ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ದಾಖಲಿಸಿದೆ.
ಸಾಮಾನ್ಯವಾಗಿ ಚಿತ್ರಗಳ ಕಲೆಕ್ಷನ್ ದಿನ ಕಳೆದಂತೆ ಇಳಿಕೆಯಾಗುವುದು ಸಹಜ. ಆದರೆ ಮಹಾವತಾರ್ ನರಸಿಂಹ ವಿಷಯದಲ್ಲಿ ಇದು ತಲೆಕೆಳಗಾಗಿ, ಪ್ರತಿ ದಿನ 20 ಕೋಟಿಗೂ ಹೆಚ್ಚು ಕಲೆಕ್ಷನ್ ಗಳಿಸುತ್ತಿದೆ. ಬಾಯಿ ಮಾತಿನ ಪ್ರಚಾರ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ದೃಶ್ಯಗಳು ಮತ್ತು ಎಲ್ಲಾ ವಯಸ್ಸಿನ ಪ್ರೇಕ್ಷಕರ ಮೆಚ್ಚುಗೆಯಿಂದ ಚಿತ್ರಮಂದಿರಗಳು ಇನ್ನೂ ಹೌಸ್‌ಫುಲ್. ಹಿಂದಿನ ಕೆಜಿಎಫ್ ಸರಣಿಯಂತೆ, ಹೊಂಬಾಳೆ ಫಿಲ್ಮ್ಸ್ ಈ ಬಾರಿ ಕೂಡ ಸದ್ದು ಮಾಡದೆ ಬಂದು ದಾಖಲೆ ಮುರಿಯುತ್ತಿದೆ. ಬಿಡುಗಡೆಯ ಮೊದಲ ದಿನದಿಂದಲೇ ಚಿತ್ರದ ದೃಶ್ಯ ವೈಭವ, ಉನ್ನತ ಮಟ್ಟದ ಅನಿಮೇಶನ್ ಮತ್ತು ಸಂಗೀತ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದೆ.
ಯಶಸ್ಸಿನ ಮೆಟ್ಟಿಲುಗಳು: 10 ದಿನಗಳಲ್ಲಿ 100 ಕೋಟಿ ಕ್ಲಬ್ ಸೇರ್ಪಡೆ, 16ನೇ ದಿನ 25 ಕೋಟಿ ರೂ.ಗಳ ದೈನಂದಿನ ಕಲೆಕ್ಷನ್, ಇಂದಿನ ತನಕ ಒಟ್ಟು ₹210 ಕೋಟಿ ಪ್ಲಸ್ ಗಳಿಕೆ ‘ಮಹಾವತಾರ್ ಸಿನಿಮ್ಯಾಟಿಕ್ ಯೂನಿವರ್ಸ್’ ದಶಕದ ಪ್ರಾಜೆಕ್ಟ್
ನಿರ್ದೇಶಕ ಅಶ್ವಿನ್ ಕುಮಾರ್ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಈ ಯೂನಿವರ್ಸ್‌ನಲ್ಲಿ ಒಟ್ಟು ಏಳು ಚಿತ್ರಗಳಿವೆ:
- ಮಹಾವತಾರ್ ನರಸಿಂಹ (2025)
- ಮಹಾವತಾರ್ ಪರಶುರಾಮ್ (2027)
- ಮಹಾವತಾರ್ ರಘುನಂದನ್ (2029)
- ಮಹಾವತಾರ್ ದ್ವಾರಕಾಧೀಶ್ (2031)
- ಮಹಾವತಾರ್ ಗೋಕುಲಾನಂದ (2033)
- ಮಹಾವತಾರ್ ಕಲ್ಕಿ – ಭಾಗ 1 (2035)
- ಮಹಾವತಾರ್ ಕಲ್ಕಿ – ಭಾಗ 2 (2037)
ಮಹಾವತಾರ್ ನರಸಿಂಹ ಈಗಾಗಲೇ ಭಾರಿ ಹಿಟ್ ಆಗಿರುವುದರಿಂದ, ಚಿತ್ರವು 500 ಕೋಟಿ ಕ್ಲಬ್ ಸೇರುವುದು ಕೇವಲ ಸಮಯದ ಪ್ರಶ್ನೆ.