Back to Top

ದರ್ಶನ್ ಸ್ಥಳಾಂತರ ಅರ್ಜಿ ವಿಚಾರಣೆ – ವಕೀಲರ ವಾದದಲ್ಲಿ ಏನೆಲ್ಲ ಹೊರಬಂದಿತು?

SSTV Profile Logo SStv September 3, 2025
ದರ್ಶನ್ ಸ್ಥಳಾಂತರ ಅರ್ಜಿ ವಿಚಾರಣೆ
ದರ್ಶನ್ ಸ್ಥಳಾಂತರ ಅರ್ಜಿ ವಿಚಾರಣೆ

ಸ್ಯಾಂಡಲ್‌ವುಡ್ ನಟ ದರ್ಶನ್ ಸೇರಿದಂತೆ ಐವರು ಆರೋಪಿಗಳ ಬಳ್ಳಾರಿ ಜೈಲು ಸ್ಥಳಾಂತರ ಕುರಿತು 64ನೇ ಸಿಸಿಹೆಚ್ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆ ರಾಜ್ಯದ ಗಮನ ಸೆಳೆದಿದೆ. ಈ ಪ್ರಕರಣದಲ್ಲಿ ದರ್ಶನ್ ಪರ ವಕೀಲರು ಹಾಗೂ ಸರ್ಕಾರದ ಪರ ವಾದ ಮಂಡನೆಗಳು ತೀವ್ರ ಸ್ವರೂಪ ಪಡೆದಿವೆ. ನಟ ದರ್ಶನ್ ಪರವಾಗಿ ವಕೀಲ ಸುನೀಲ್ ಮತ್ತು ಸಂದೇಶ್ ಚೌಟಾ ವಾದ ಮಂಡಿಸಿದರು. “ದರ್ಶನ್ ಸೆಲೆಬ್ರಿಟಿ ಆಗಿರುವುದರಿಂದಲೇ ಪೊಲೀಸರು ಮತ್ತು ಜೈಲಾಧಿಕಾರಿಗಳು ದುರ್ಬಳಕೆ ಮಾಡುತ್ತಿದ್ದಾರೆ” ಎಂದು ಸುನೀಲ್ ವಾದಿಸಿದರು.

ಅವರ ಮಾತಿನ ಪ್ರಕಾರ, ಕೋರ್ಟ್ ಕಸ್ಟಡಿಯಲ್ಲಿ ಇರುವ ಕೈದಿಗಳಿಗೆ ಕೇವಲ ಆಡಳಿತಾತ್ಮಕ ಹಾಗೂ ಭದ್ರತೆ ಆಧಾರವಿಲ್ಲದೆ ಸ್ಥಳಾಂತರಿಸುವುದು ಕಾನೂನಿನ ಪ್ರಕಾರ ಸರಿಯಲ್ಲ. “ಪ್ರಿಸನರ್ಸ್ ಆಕ್ಟ್ 1963 ಪ್ರಕಾರ ಕೇವಲ ನಾಲ್ಕು ಕಾರಣಗಳಿಗಷ್ಟೇ ಕೈದಿಗಳನ್ನು ಸ್ಥಳಾಂತರಿಸಬಹುದು. ಆದರೆ ಈ ಪ್ರಕರಣದಲ್ಲಿ ಅದಕ್ಕೆ ತಕ್ಕ ಕಾರಣಗಳಿಲ್ಲ” ಎಂದು ಅವರು ಕೋರ್ಟ್ ಗಮನಕ್ಕೆ ತಂದರು. ಹಿರಿಯ ವಕೀಲ ಸಂದೇಶ್ ಚೌಟ ಕೂಡಾ ದರ್ಶನ್ ತಾಯಿಯ ಅನಾರೋಗ್ಯ ಸೇರಿದಂತೆ ಹಲವು ಕಾರಣಗಳನ್ನು ಕೋರ್ಟ್ ಮುಂದೆ ಮಂಡಿಸಿ, ಬಳ್ಳಾರಿಗೆ ಶಿಫ್ಟ್ ಮಾಡಬಾರದು ಎಂದು ಒತ್ತಾಯಿಸಿದರು.

ಸರ್ಕಾರದ ಪರವಾಗಿ ಎಸ್‌ ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿ, ದರ್ಶನ್ ಮತ್ತು ಇತರರನ್ನು ಬಳ್ಳಾರಿಗೆ ಸ್ಥಳಾಂತರಿಸಲು ಒತ್ತಾಯಿಸಿದರು. ಅವರು ಕೈದಿಗಳ ಸುರಕ್ಷತೆ ಹಾಗೂ ಆಡಳಿತಾತ್ಮಕ ಕಾರಣಗಳನ್ನು ಕೋರ್ಟ್ ಮುಂದೆ ಹೈಲೈಟ್ ಮಾಡಿದರು. ದರ್ಶನ್ ಅಂಡ್ ಗ್ಯಾಂಗ್ ವಿರುದ್ಧದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈ ವಿಚಾರಣೆ ನಡೆಯುತ್ತಿದೆ. ದರ್ಶನ್, ನಾಗರಾಜು, ಲಕ್ಷ್ಮಣ್, ಜಗದೀಶ್ ಸೇರಿದಂತೆ ಐವರು ಆರೋಪಿಗಳ ಸ್ಥಳಾಂತರ ಕುರಿತು ಈಗ ನಿರ್ಣಾಯಕ ಹಂತ ಬಂದಿದೆ.

ಕೋರ್ಟ್ ತೀರ್ಪು ಯಾವ ದಿಕ್ಕಿಗೆ ತಿರುಗುತ್ತದೆ ಎಂಬುದರತ್ತ ರಾಜ್ಯದಾದ್ಯಂತ ಗಮನ ಹರಿದಿದೆ. ಒಂದೆಡೆ ದರ್ಶನ್ ಪರ ವಕೀಲರು ಕಾನೂನು ಅಂಶಗಳನ್ನು ಮುಂದಿಟ್ಟು ಸ್ಥಳಾಂತರ ವಿರೋಧಿಸುತ್ತಿರುವಾಗ, ಇನ್ನೊಂದೆಡೆ ಸರ್ಕಾರದ ಪರ ವಾದವು ಭದ್ರತೆ, ಆಡಳಿತಾತ್ಮಕ ಕಾರಣಗಳ ಮೇಲೆ ನೆಲೆಯಾಗಿದೆ. ಮುಂದಿನ ವಿಚಾರಣೆಯ ಬಳಿಕವೇ ದರ್ಶನ್ ಬಳ್ಳಾರಿ ಜೈಲು ಸ್ಥಳಾಂತರವಾಗುತ್ತಾರೋ, ಅಥವಾ ಇಂದಿನಲ್ಲೇ ಮುಂದುವರೆಯುತ್ತಾರೋ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.