"ಜೀವಾವಧಿ ಕೈದಿಗಳಿಗೆ ಸೌಲಭ್ಯ ಇದೆ, ಆದರೆ ದರ್ಶನ್‌ಗೆ ಯಾಕೆ ಇಲ್ಲ?" – ವಕೀಲ ಸುನೀಲ್ ಪ್ರಶ್ನೆ


ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್ ಪರವಾಗಿ ವಕೀಲರು ಸಲ್ಲಿಸಿದ ಅರ್ಜಿ ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ದರ್ಶನ್ ಅವರಿಗೆ ಬೆಡ್‌ಶೀಟ್, ದಿಂಬು, ಮನೆ ಊಟ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ನೀಡುವಂತೆ ಮನವಿ ಮಾಡಲಾಗಿದ್ದು, ಈ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಸೆಪ್ಟೆಂಬರ್ 9ಕ್ಕೆ ಕಾಯ್ದಿರಿಸಿದೆ.
ದರ್ಶನ್ ಪರ ವಾದಿಸಿದ ವಕೀಲ ಸುನೀಲ್ ಕುಮಾರ್ ಅವರು ಜೈಲಿನ ಸ್ಥಿತಿಗತಿ ಬಗ್ಗೆ ಕೋರ್ಟ್ ಮುಂದೆ ವಿವರಿಸುತ್ತಾ, ಕೈದಿಗಳಿಗೆ ಜೈಲು ಮ್ಯಾನ್ಯುಯಲ್ ಪ್ರಕಾರ ಸ್ವಂತ ಖರ್ಚಿನಲ್ಲಿ ಪ್ಲೇಟ್, ಚಪ್ಪಲಿ, ಸ್ಪೂನ್, ಹಾಸಿಗೆ, ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳನ್ನು ಪಡೆಯುವ ಅವಕಾಶವಿದೆ ಎಂದು ಹೇಳಿದರು. ಆದರೆ ದರ್ಶನ್ ಅವರ ವಿಷಯದಲ್ಲಿ ಈ ಸೌಲಭ್ಯಗಳನ್ನು ನಿರಾಕರಿಸಲಾಗಿದೆ ಎಂದು ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. "ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಿಗೆ ಸೌಲಭ್ಯ ನೀಡಲಾಗುತ್ತಿದೆ, ಆದರೆ ವಿಚಾರಣಾಧೀನ ದರ್ಶನ್ ಮಾತ್ರ ಅದರಿಂದ ವಂಚಿತರಾಗಿದ್ದಾರೆ. ಇದು ತಾರತಮ್ಯವಲ್ಲವೇ?" ಎಂದು ಸುನೀಲ್ ಪ್ರಶ್ನಿಸಿದರು.
ಸುನೀಲ್ ತಮ್ಮ ವಾದದಲ್ಲಿ ಪ್ರಜ್ವಲ್ ರೇವಣ್ಣ ಅವರ ಉದಾಹರಣೆಯನ್ನು ನೀಡಿದರು. "ಎನ್‌ಐಎ ಕೇಸ್‌ನಲ್ಲಿ ವೈದ್ಯರು ಕೂಡ ಜೈಲು ಸೇರಿದ್ದರು. ಅವರಿಗೆ ವಿಶೇಷ ಆತಿಥ್ಯ ಒದಗಿಸಲಾಯಿತು. ಪ್ರಜ್ವಲ್ ರೇವಣ್ಣ ಕೂಡಾ ಜೈಲಲ್ಲಿದ್ದಾರೆ. ಆದರೆ ದರ್ಶನ್ ವಿಚಾರದಲ್ಲಿ ಮಾತ್ರ ತಾರತಮ್ಯ ಏಕೆ?" ಎಂದು ಪ್ರಶ್ನೆ ಎತ್ತಿದರು. ವಕೀಲರ ಪ್ರಕಾರ, ದರ್ಶನ್ ಕಳೆದ ಒಂದು ತಿಂಗಳಿನಿಂದ ಬ್ಯಾರಕ್‌ನಿಂದ ಹೊರಬರದೇ ಇದ್ದಾರೆ. ಬಿಸಿಲು ಕೂಡ ನೋಡಿಲ್ಲ. ಫೋನ್‌ನಲ್ಲಿ ಮಾತನಾಡಲು, ಪತ್ರ ಕಳುಹಿಸಲು ಸಹ ಅವಕಾಶ ನೀಡಲಾಗುತ್ತಿಲ್ಲ. "ಈ ರೀತಿಯ ನಡೆ ಮೂಲಭೂತ ಹಕ್ಕುಗಳ ಉಲ್ಲಂಘನೆ" ಎಂದು ಅವರು ಅಭಿಪ್ರಾಯಪಟ್ಟರು.
ಇನ್ನೂ, ದರ್ಶನ್ ಅವರ ಬಲಗೈಗೆ ಆಪರೇಷನ್ ಆಗಿದ್ದು, ಅವರಿಗೆ ಆರೋಗ್ಯ ಸಂಬಂಧಿತ ತೊಂದರೆಗಳೂ ಎದುರಾಗುತ್ತಿವೆ. ಇಂತಹ ಸಂದರ್ಭದಲ್ಲಿಯೂ ಕನಿಷ್ಠ ಸೌಲಭ್ಯ ನೀಡದಿರುವುದು ನ್ಯಾಯವಲ್ಲ ಎಂದು ವಾದ ಮಂಡಿಸಿದರು. ಸುನೀಲ್, ಸುಪ್ರಿಂ ಕೋರ್ಟ್‌ನ ಆದೇಶವನ್ನು ಉಲ್ಲೇಖಿಸಿ, "ಪ್ರತಿ ಕೈದಿಗೂ ಕನಿಷ್ಠ ಸೌಲಭ್ಯ, ಹೈಜೀನಿಕ್ ಆಹಾರ ಹಾಗೂ ಮೂಲಭೂತ ಸೌಲಭ್ಯ ನೀಡಬೇಕು" ಎಂಬ ನಿಯಮವನ್ನು ಸ್ಮರಿಸಿದರು. "ಬೇಲ್ ರದ್ದಾಗಿದೆ ಅನ್ನೋ ಕಾರಣಕ್ಕೆ ಹಕ್ಕುಗಳನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ" ಎಂದು ವಾದಿಸಿದರು.
ದರ್ಶನ್ ಪರ ವಕೀಲರು, ನಟನನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಬಾರದು ಹಾಗೂ ಕನಿಷ್ಠ ಸೌಲಭ್ಯಗಳನ್ನು ಒದಗಿಸಬೇಕೆಂದು ಕೋರ್ಟ್ ಮುಂದೆ ಮನವಿ ಮಾಡಿದ್ದಾರೆ. ಈಗ ಕೋರ್ಟ್ ತೀರ್ಪು ಸೆಪ್ಟೆಂಬರ್ 9ರಂದು ಹೊರಬರಲಿದೆ.
Trending News
ಹೆಚ್ಚು ನೋಡಿ“ಇಂದು ನನ್ನ ಜೀವನದ ವಿಶೇಷ ದಿನ” – ಮೊದಲ ಸಿನಿಮಾ ಬಿಡುಗಡೆ ದಿನವನ್ನು ಆಚರಿಸಿದ ಕೆಂಡಸಂಪಿಗೆ ಹೀರೋ!
