ಡಿ ಗ್ಯಾಂಗ್‌ಗೆ ಶಾಕ್! ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗೆ ಪೊಲೀಸರ ಮನವಿ – 6 ತಿಂಗಳಲ್ಲಿ ಟ್ರಯಲ್ ಮುಗಿಸಲು ಸಿದ್ಧತೆ


ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಸೇರಿರುವ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಆರೋಪಿಗಳಿಗೆ ಮತ್ತಷ್ಟು ಢವಢವ ಶುರುವಾಗಿದೆ. ಪ್ರಕರಣವನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಲು ಪೊಲೀಸರು ಫಾಸ್ಟ್ ಟ್ರ್ಯಾಕ್ ಕೋರ್ಟ್ ರಚನೆಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ಸುಪ್ರೀಂ ಕೋರ್ಟ್ ಆರೋಪಿಗಳ ಜಾಮೀನು ರದ್ದುಪಡಿಸಿ, 6 ತಿಂಗಳ ಒಳಗೆ ಟ್ರಯಲ್ ಮುಗಿಸಿ ವರದಿ ಸಲ್ಲಿಸಲು ಸೂಚಿಸಿತ್ತು. ಇದರಿಂದಲೇ ಪೊಲೀಸರು ಕಾನೂನು ಇಲಾಖೆಯೊಂದಿಗೆ ಚರ್ಚೆ ನಡೆಸಿ ಸೋಮವಾರವೇ ಸರ್ಕಾರಕ್ಕೆ ಮನವಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ-1 ಪವಿತ್ರಾ ಗೌಡ ಮತ್ತು ಎ-2 ನಟ ದರ್ಶನ್ ಸೇರಿ ಏಳು ಮಂದಿಗೆ ಹೈಕೋರ್ಟ್ ನೀಡಿದ್ದ ಜಾಮೀನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ತಕ್ಷಣವೇ ಬಂಧನಕ್ಕೆ ಆದೇಶಿಸಿದ್ದರಿಂದ, ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆ ಬಳಿಕ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ಈಗ ಫಾಸ್ಟ್ ಟ್ರ್ಯಾಕ್ ಕೋರ್ಟ್‌ನಲ್ಲಿ ಟ್ರಯಲ್ ಆರಂಭವಾದರೆ ಡಿ ಗ್ಯಾಂಗ್‌ಗೆ ಇನ್ನಷ್ಟು ಸಂಕಟ ಎದುರಾಗುವುದು ಖಚಿತ.