“ದರ್ಶನ್ ಜೀವನ ಹಾಳು ಮಾಡಿಕೊಂಡರು, ಅಕ್ಕಪಕ್ಕದವರ ಸಹವಾಸ ಬಿಡ್ಬೇಕು” – ಸುಪ್ರೀಂ ತೀರ್ಪಿಗೆ ರಮ್ಯಾ ಪ್ರತಿಕ್ರಿಯೆ


ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಕುರಿತು ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ತಮ್ಮ ಭಾವನೆ ಹಂಚಿಕೊಂಡಿದ್ದಾರೆ.
ರಮ್ಯಾ, ದರ್ಶನ್ ಬಗ್ಗೆ ತಮ್ಮ ನೋವನ್ನು ಹೊರಹಾಕಿದ್ದಾರೆ. “ದರ್ಶನ್ ಜೊತೆ ನಾನು ಸಿನಿಮಾದಲ್ಲಿ ನಟಿಸಿದ್ದೇನೆ. ಶೂಟಿಂಗ್ ವೇಳೆ ಅವರು ತಮ್ಮ ಹಾದಿ ಬಗ್ಗೆ ಹಂಚಿಕೊಂಡಿದ್ದರು. ಲೈಟ್ ಬಾಯ್ ಆಗಿ ಶುರು ಮಾಡಿ ಈ ಮಟ್ಟಕ್ಕೆ ಬೆಳೆದದ್ದು ನನಗೆ ಹೆಮ್ಮೆ ತಂದಿತ್ತು. ಆದರೆ ಇತ್ತೀಚಿನ ಅವರ ನಡವಳಿಕೆಯಿಂದ ತುಂಬಾ ಬೇಜಾರಾಯಿತು. ಎಲ್ಲೋ ಒಂದು ಕಡೆ ಅವರು ತಮ್ಮ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ” ಎಂದು ಹೇಳಿದರು. ಅವರು ಮುಂದುವರೆದು, “ಈ ಮಟ್ಟಕ್ಕೆ ಬೆಳೆದ ಮೇಲೆ ಜವಾಬ್ದಾರಿ ಇರುತ್ತದೆ. ಆದರೆ ದರ್ಶನ್ ಅಕ್ಕಪಕ್ಕ ಯಾರೂ ಒಳ್ಳೆಯವರಿಲ್ಲ ಅನ್ನಿಸುತ್ತಿದೆ. ಒಳ್ಳೆಯವರ ಸಹವಾಸ ಇದ್ದರೆ, ಇಂದಿನ ಪರಿಸ್ಥಿತಿ ಬರುವುದೇ ಇರಲಿಲ್ಲ. ಮೊದಲು ಅಕ್ಕಪಕ್ಕದವರ ಸಹವಾಸ ಬಿಡ್ಬೇಕು, ಜೀವನವನ್ನು ಒಳ್ಳೆಯ ದಾರಿಯಲ್ಲಿ ನಡೆಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.
ಸುಪ್ರೀಂ ಕೋರ್ಟ್ ತೀರ್ಪು ಕುರಿತು ಮಾತನಾಡಿದ ರಮ್ಯಾ, “ಈ ಜಡ್ಜ್ಮೆಂಟ್ ಕೇಳಿದಾಗ ನನಗೆ ರಿಲೀಫ್ ಅನಿಸಿತು. ನಮ್ಮ ಸಮಾಜ ಈಗ ಕೆಟ್ಟ ದಾರಿಯಲ್ಲಿದೆ. ಹೆಣ್ಣುಮಕ್ಕಳ ಗೌರವ, ರಕ್ಷಣೆ ವಿಷಯದಲ್ಲಿ ಇದು ಮಹತ್ವದ ನಿರ್ಧಾರ. ಯಾರೇ ಆಗಿರಲಿ, ಎಲ್ಲರೂ ಕಾನೂನಿನ ಮುಂದೆ ಸಮಾನರು ಎಂಬ ಸಂದೇಶ ಸಮಾಜಕ್ಕೆ ಹೋಗಿದೆ” ಎಂದು ಹೇಳಿದರು. ಪವಿತ್ರಾ ಗೌಡ ಕುರಿತು ಸಾಫ್ಟ್ ಕಾರ್ನರ್ ತೋರಿದ ರಮ್ಯಾ, “ಮೊದಲು ಆಕೆಯ ಬಗ್ಗೆ ನನಗೆ ಗೊತ್ತಿರಲಿಲ್ಲ. ಆದರೆ ಆಕೆಗೆ ಈ ಸ್ಥಿತಿ ಬರಬಾರದಿತ್ತು. ಪವಿತ್ರಾ ಗೌಡ ಒಬ್ಬ ತಾಯಿ, ಮಗಳು ಇದ್ದಾಳೆ. ಕಾನೂನು ಕೈಗೆ ತೆಗೆದುಕೊಳ್ಳದೇ ಇದ್ದಿದ್ದರೆ ಇಂತಹ ಪರಿಸ್ಥಿತಿ ಬರುವುದೇ ಇರಲಿಲ್ಲ. ಕೋಪ ಎಲ್ಲರಿಗೂ ಬರುತ್ತದೆ, ಆದರೆ ಕಾನೂನನ್ನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ಅಂತಹ ನಿರ್ಧಾರಗಳು ಜೀವನವನ್ನೇ ಹಾಳು ಮಾಡುತ್ತವೆ” ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ರೇಣುಕಾಸ್ವಾಮಿ ಕುಟುಂಬದ ಬಗ್ಗೆ ಮಾತನಾಡಿದ ರಮ್ಯಾ, “ಅವರದ್ದು ಬಡಕುಟುಂಬ. ಸುಪ್ರೀಂ ತೀರ್ಪಿನಿಂದ ಅವರಿಗೆ ನ್ಯಾಯ ಸಿಕ್ಕಂತಾಗಿದೆ” ಎಂದು ತಿಳಿಸಿದರು. ರಮ್ಯಾ ಅವರ ಈ ಹೇಳಿಕೆ, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.