ಮಾಸ್ಸ್ ಹೀರೋಗೆ ‘ರಾಜಾತಿಥ್ಯ’ ಇಲ್ಲ – ಬಿ.ದಯಾನಂದ್ ಕೈಯಲ್ಲಿ ದರ್ಶನ್ ಜೈಲು ಭವಿಷ್ಯ!


ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಟಾರ್ ನಟ ದರ್ಶನ್ ಬಂಧನದ ಹಿಂದಿನಿಂದ ಹಿಡಿದು, ಅವರು ಮತ್ತೆ ಜೈಲು ಸೇರುವವರೆಗೂ, ಐಪಿಎಸ್ ಅಧಿಕಾರಿ ಬಿ. ದಯಾನಂದ್ ಅವರ ಪಾತ್ರ ಅತ್ಯಂತ ಪ್ರಮುಖವಾಗಿದೆ.
ದರ್ಶನ್ ಮಾಸ್ ಹೀರೋ, ಭಾರಿ ಅಭಿಮಾನಿ ಬಳಗ, ರಾಜಕೀಯ ಪ್ರಭಾವ ಈ ಎಲ್ಲವನ್ನು ಬದಿಗಿರಿಸಿ, ಅವರನ್ನು ಕೊಲೆ ಆರೋಪದಲ್ಲಿ ಬಂಧಿಸುವ ನಿರ್ಧಾರವನ್ನು ಆಗಿನ ಬೆಂಗಳೂರು ಪೊಲೀಸ್ ಕಮೀಷನರ್ ಬಿ. ದಯಾನಂದ್ ಕೈಗೊಂಡಿದ್ದರು. ಅನಾಥ ಶವ ಪತ್ತೆಯಾದ ಪ್ರಕರಣವನ್ನು ಆಳವಾಗಿ ತನಿಖೆ ನಡೆಸಿ, ರೇಣುಕಾಸ್ವಾಮಿ ಹತ್ಯೆಗೆ ದರ್ಶನ್ ನೇರ ಸಂಬಂಧವಿದೆ ಎಂಬ ಸಾಕ್ಷ್ಯಗಳನ್ನು ಪತ್ತೆಹಚ್ಚಿದರು. ಬಂಧನ ಕಾರ್ಯಾಚರಣೆ ಸಂದರ್ಭದಲ್ಲಿ ಗಲಾಟೆಯ ಭೀತಿ ಇದ್ದರೂ, ದಯಾನಂದ್ ಯಾವುದೇ ಹಿಂಜರಿತವಿಲ್ಲದೆ ಎಸಿಪಿ ಚಂದನ್ ಮತ್ತು ಅವರ ತಂಡಕ್ಕೆ ಗ್ರೀನ್ ಸಿಗ್ನಲ್ ನೀಡಿದರು. ದರ್ಶನ್ ಪ್ರಭಾವಿ ರಾಜಕೀಯ ಮುಖಂಡರೊಂದಿಗೆ ಆಪ್ತತೆಯನ್ನು ಬಳಸುವ ಅವಕಾಶವೇ ಸಿಗದಂತೆ ಪೊಲೀಸರು ಜಾಗೃತಿಯಿಂದ ಕಾರ್ಯಾಚರಣೆ ನಡೆಸಿದರು.
ದರ್ಶನ್ ಬಂಧನಕ್ಕೆ ಯಾವುದೇ ರಾಜಕೀಯ ಅಡ್ಡಿ ಬಾರದಂತೆ ಮಾಡಲು, ದಯಾನಂದ್ ಸ್ವತಃ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವರಿಗೆ ಪ್ರಕರಣದ ಪೋಟೋ ಮತ್ತು ವಿಡಿಯೋ ಸಾಕ್ಷ್ಯಗಳೊಂದಿಗೆ ವಿವರಿಸಿದರು. ಅವರ ಅನುಮತಿ ಪಡೆಯುವುದರೊಂದಿಗೆ ಬಂಧನಕ್ಕೆ ಮುನ್ನಡೆ ನೀಡಿದರು. ಹೈಕೋರ್ಟ್ ದರ್ಶನ್‌ಗೆ ಜಾಮೀನು ನೀಡಿದ ಬಳಿಕ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ತೀರ್ಮಾನವನ್ನೂ ದಯಾನಂದ್ ತೆಗೆದುಕೊಂಡಿದ್ದರು. ಇದರ ಫಲವಾಗಿ, ಇತ್ತೀಚೆಗೆ ಸುಪ್ರೀಂ ಕೋರ್ಟ್ ಎಲ್ಲಾ ಆರೋಪಿಗಳ ಜಾಮೀನು ರದ್ದುಗೊಳಿಸಿದೆ.
ಪ್ರಸ್ತುತ ಬಿ. ದಯಾನಂದ್ ರಾಜ್ಯದ ಜೈಲುಗಳ ಎಡಿಜಿಪಿ ಆಗಿದ್ದಾರೆ. ಹೀಗಾಗಿ ದರ್ಶನ್ ಮತ್ತೆ ಜೈಲು ಸೇರಿದ ನಂತರ ಅವರಿಗೆ ಯಾವುದೇ ರಾಜಾತಿಥ್ಯ ಸಿಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಅವರದೇ. ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಕಳುಹಿಸುವ ಸಾಧ್ಯತೆ ಹೆಚ್ಚಾಗಿದೆ. ಜೈಲು ಜೀವನ ಕಟ್ಟುನಿಟ್ಟಾಗಿರಲು ದಯಾನಂದ್ ಹದ್ದಿನ ಕಣ್ಣು ಇಡಲಿದ್ದಾರೆ.
ದರ್ಶನ್ ಬಂಧನದಿಂದ ಹಿಡಿದು ಜೈಲಿನಲ್ಲಿ ಇರಿಸುವವರೆಗೂ, ಬಿ. ದಯಾನಂದ್ ಮತ್ತು ಎಸಿಪಿ ಚಂದನ್ ಈ ಪ್ರಕರಣದ ಪ್ರಮುಖ ಸಿಂಹಸ್ವಪ್ನಗಳಾಗಿ ಪರಿಣಮಿಸಿದ್ದಾರೆ. ದರ್ಶನ್, ಪವಿತ್ರಾ ಗೌಡ, ಪ್ರದೋಷ್ ಸೇರಿದಂತೆ 7 ಆರೋಪಿಗಳು ಈಗ ಕೋರ್ಟ್ ತೀರ್ಪು ಬರುವವರೆಗೂ ಜೈಲು ಮುದ್ದೆ ಮುರಿಯಬೇಕಾಗುತ್ತದೆ.