ಅಂದು ಜೈಲಿನಲ್ಲಿದ್ದಾಗ ‘ಸಾರಥಿ’ ಹಿಟ್ – ಈಗ ‘ಡೆವಿಲ್’ಗೂ ಅದೇ ಅದೃಷ್ಟ ಬರಬಹುದಾ?


ನಟ ದರ್ಶನ್ ಕನ್ನಡ ಚಿತ್ರರಂಗದ ಮಾಸ್ ಹೀರೋ, ಅಭಿಮಾನಿಗಳ ಹೃದಯದ “ಡಿ ಬಾಸ್”. ಆದರೆ, ಅವರ ಜೀವನದಲ್ಲಿ ಸಿನಿಮಾ ಹಾಗೂ ವಿವಾದ ಎರಡೂ ಒಂದೇ ಸಮನಾಗಿ ಸಾಗುತ್ತಿರುವಂತಿದೆ. ಈಗ ಮತ್ತೊಮ್ಮೆ ದರ್ಶನ್ ಜೈಲು ಸೇರುವ ಸ್ಥಿತಿ ಎದುರಾಗಿದೆ.
2011ರ ಫೆಬ್ರವರಿ 9 ಆ ದಿನ ದರ್ಶನ್ ಅವರ ಬದುಕಿನಲ್ಲಿ ದೊಡ್ಡ ತಿರುವು. ಪತ್ನಿ ವಿಜಯಲಕ್ಷ್ಮಿ ಹಲ್ಲೆ ಆರೋಪದ ಮೇಲೆ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿ, ಪೊಲೀಸರು ದರ್ಶನ್ ಅವರನ್ನು ಬಂಧಿಸಿ ನೇರವಾಗಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದರು. ಆ ಸಮಯದಲ್ಲಿ ಅವರ “ಸಾರಥಿ” ಸಿನಿಮಾ ಬಿಡುಗಡೆಯಾಗಿ, ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಮುರಿದು, ದರ್ಶನ್‌ಗೆ ಮರುಜನ್ಮ ನೀಡಿತ್ತು. ಜೈಲಿನಲ್ಲಿದ್ದರೂ ಅಭಿಮಾನಿಗಳು ಸಿನಿಮಾ ಹಿಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕಟ್ಟಾ ಜಗದೀಶ್ ಅವರಂತೆ ಆಪ್ತರು ಜೈಲಿನಲ್ಲಿಯೇ ಹಿಟ್ ಆಗುತ್ತದೆ ಎಂದು ಧೈರ್ಯ ತುಂಬಿದ್ದರು.
ಇದೀಗ 2025 ದರ್ಶನ್ ಮತ್ತೊಮ್ಮೆ ವಿವಾದದ ತುತ್ತಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದು, ಮತ್ತೆ ಕಂಬಿ ಹಿಂದೆ ಹೋಗಬೇಕಾದ ಪರಿಸ್ಥಿತಿ. ಆದರೆ ಈ ಬಾರಿ ಪರಿಸ್ಥಿತಿ ವಿಭಿನ್ನ. ಅವರು ಇತ್ತೀಚೆಗಷ್ಟೇ ‘ಡೆವಿಲ್’ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದು, ಪೋಸ್ಟ್-ಪ್ರೊಡಕ್ಷನ್ ಹಂತ ಬಾಕಿಯಿದೆ. ಮಿಲನ್ ಪ್ರಕಾಶ್ ನಿರ್ಮಾಪಕರಾಗಿರುವ ಈ ಸಿನಿಮಾದ ಹಾಡು “ಇದ್ದರೇ, ನೆಮ್ಮದಿಯಾಗಿರಬೇಕು” ಆಗಸ್ಟ್ 15ರಂದು ಬಿಡುಗಡೆಯಾಗಲಿದೆ.
ಈ ನಡುವೆ, ಅಭಿಮಾನಿಗಳಲ್ಲಿ ಕುತೂಹಲ “ಸಾರಥಿ” ಹಿಟ್ ಆಗಿದ್ದಂತೆ, ‘ಡೆವಿಲ್’ಗೂ ಅದೇ ಅದೃಷ್ಟ ಸಿಗಬಹುದಾ? ಅಥವಾ ಜೈಲು ವಿವಾದ ಚಿತ್ರದ ಮೇಲೆ ನೆರಳು ಬೀರುವುದಾ? ಎಂಬುದು ಚರ್ಚೆಯ ವಿಷಯ. ಇದಲ್ಲದೆ, ದರ್ಶನ್ ಅವರ ‘ಡಿ 58’ (ಪ್ರೇಮ್ ನಿರ್ದೇಶನ) ಮತ್ತು ‘ಡಿ 59’ (ತರುಣ್ ಸುಧೀರ್ ನಿರ್ದೇಶನ) ಸಿನಿಮಾಗಳು ಯೋಜನೆಯಲ್ಲಿದ್ದರೂ, ಜೈಲು ಸೇರುವ ಹಿನ್ನೆಲೆ ಕನಿಷ್ಠ ಆರು ತಿಂಗಳು ಶೆಲ್ಫ್ ಮೇಲೆಯೇ ಉಳಿಯುವ ಸಾಧ್ಯತೆ.
ಒಟ್ಟಿನಲ್ಲಿ, “ಸಾರಥಿ” ಕಾಲದ ಇತಿಹಾಸ ‘ಡೆವಿಲ್’ಗೂ ಪುನರಾವರ್ತನೆಯಾಗುತ್ತದೆಯಾ ಅಥವಾ ಕಾಲ ಬದಲಾಗಿದೆ ಎಂಬುದು ನೋಡಬೇಕಾಗಿದೆ. ಅಭಿಮಾನಿಗಳಿಗಂತೂ ದರ್ಶನ್ ಪರದೆಯ ಮೇಲೆ ಮತ್ತೆ ಬಾಕ್ಸ್ ಆಫೀಸ್ ಗೆಲ್ಲಬೇಕು ಎಂಬ ಆಶೆಯೇ ಉಳಿದಿದೆ.