ದರ್ಶನ್ ಆ್ಯಂಡ್ ಗ್ಯಾಂಗ್‌ಗೆ ಶರಣಾಗತಿ ಚಾನ್ಸ್ ಇಲ್ಲ – ಖಾಕಿ ಪಡೆ ಸ್ಪೆಷಲ್ ಆಪರೇಷನ್ ಆರಂಭ!


ಸುಪ್ರೀಂ ಕೋರ್ಟ್‌ನ ತೀರ್ಪು ಹೊರಬಂದ ತಕ್ಷಣವೇ ದರ್ಶನ್ ಆ್ಯಂಡ್ ಗ್ಯಾಂಗ್ ಬಂಧನ ಕಾರ್ಯಾಚರಣೆ ಆರಂಭವಾಗಿದೆ. ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ವಿಶೇಷ ತಂಡ ರಚನೆಯಾಗಿ, ಆರೋಪಿಗಳ ಹುಡುಕಾಟ ಮತ್ತು ಬಂಧನಕ್ಕೆ ಬೃಹತ್ ಮಟ್ಟದ ಕಾರ್ಯಾಚರಣೆ ನಡೆಯುತ್ತಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ಜಾಮೀನು ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿ, ಎಲ್ಲಾ ಆರೋಪಿಗಳನ್ನು ತಕ್ಷಣ ಕಸ್ಟಡಿಗೆ ಪಡೆಯಲು ಆದೇಶಿಸಿದೆ. ತೀರ್ಪು ಹೊರಬಂದ ತಕ್ಷಣವೇ ಪೊಲೀಸರು ಅಲರ್ಟ್ ಆಗಿ, ಯಾವುದೇ ವಿಳಂಬವಿಲ್ಲದೆ ಬಂಧನ ಪ್ರಕ್ರಿಯೆ ಆರಂಭಿಸಿದ್ದಾರೆ.
ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ನೇತೃತ್ವದ ವಿಶೇಷ ತಂಡ, ದರ್ಶನ್ ಸೇರಿದಂತೆ ಒಟ್ಟು 7 ಆರೋಪಿಗಳನ್ನು ಬಂಧಿಸುವ ಗುರಿ ಹೊಂದಿದೆ. ಪ್ರದೋಶ್ ಈಗಾಗಲೇ ಬಂಧನಕ್ಕೊಳಗಾಗಿದ್ದಾರೆ, ಪವಿತ್ರಾ ಗೌಡ ಕೂಡ ವಶಕ್ಕೆ ಪಡೆದಿದ್ದಾರೆ. ಉಳಿದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲು ತಂಡ ಹಂತ ಹಂತವಾಗಿ ಮುಂದಾಗಿದೆ.
ದರ್ಶನ್ ಪ್ರಸ್ತುತ ತಮಿಳುನಾಡಿನಲ್ಲಿ ಇದ್ದಾರೆ ಎಂಬ ಮಾಹಿತಿ ಇದ್ದು, ಸಂಜೆ ವೇಳೆಗೆ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ. ಪೊಲೀಸರು ಅವರನ್ನು ಹಿಂತಿರುಗುತ್ತಿದ್ದಂತೆಯೇ ಬಂಧಿಸಲು ಸಜ್ಜಾಗಿದ್ದಾರೆ. ದರ್ಶನ್‌ನ ಡ್ರೈವರ್ ಲಕ್ಷ್ಮಣ ಎಲ್ಲಿ ಇದ್ದಾರೆ ಎಂಬುದೂ ಪೊಲೀಸ್ ತನಿಖೆಯ ಭಾಗವಾಗಿದೆ. ವಿಶೇಷ ತಂಡ ಆರೋಪಿಗಳು ಎಲ್ಲೆಲ್ಲಿ ಇದ್ದರೂ ಅಲ್ಲಿಗೇ ತೆರಳಿ ಬಂಧಿಸುತ್ತಿದೆ. ಕೆಲವರನ್ನು ಮೊದಲು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರಾ ಅಥವಾ ನೇರವಾಗಿ ಠಾಣೆಗೆ ಕರೆದುಕೊಂಡು ಹೋಗುತ್ತಾರಾ ಎಂಬುದರ ಕುರಿತು ಇನ್ನೂ ಸ್ಪಷ್ಟತೆ ಇಲ್ಲ. ಆದಾಗ್ಯೂ, ಬಂಧಿತರನ್ನು ಸಂಜೆ 4 ಗಂಟೆಗೆ ಕೋರ್ಟ್‌ಗೆ ಹಾಜರುಪಡಿಸುವ ಪ್ರಯತ್ನ ಪೊಲೀಸರಿಂದ ನಡೆಯುತ್ತಿದೆ.