ಸುಪ್ರೀಂ ತೀರ್ಪು ಬೆನ್ನಲ್ಲೇ ದರ್ಶನ್ ಮಿಸ್ಸಿಂಗ್ – ಪೊಲೀಸರು ಸರ್ಚ್ ಆಪರೇಶನ್ ಆರಂಭ!


ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದ್ದು, ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳ ಜಾಮೀನನ್ನು ರದ್ದುಪಡಿಸಿದೆ. ನ್ಯಾಯಾಲಯವು ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಆದೇಶಿಸಿದೆ. ಆದರೆ ತೀರ್ಪಿನ ಕೆಲವೇ ಗಂಟೆಗಳಲ್ಲಿ, ದರ್ಶನ್ ಮನೆಯಲ್ಲಿ ಕಾಣೆಯಾಗಿರುವ ಮಾಹಿತಿ ಹೊರಬಿದ್ದಿದೆ.
ಮೂಲಗಳ ಪ್ರಕಾರ, ನಿನ್ನೆ ರಾತ್ರಿ ವರೆಗೆ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಅವರೊಂದಿಗೆ ಬೆಂಗಳೂರಿನಲ್ಲಿದ್ದರು. ಆದರೆ ನಂತರ ಅವರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ. ದರ್ಶನ್ ನಿನ್ನೆ ರಾತ್ರಿಯೇ ಬೆಂಗಳೂರು ಬಿಟ್ಟು ಹೊರಟಿದ್ದಾರೆ ಎಂಬ ಮಾಹಿತಿ ಅವರ ಆಪ್ತ ಬಳಗದಿಂದ ಬಂದಿದೆ. ಈ ನಡುವೆ, ಪತ್ನಿ ವಿಜಯಲಕ್ಷ್ಮಿ ಅವರು ಬೆಂಗಳೂರಿನ ಹೊಸಕೆರೆಹಳ್ಳಿಯ ಪ್ರೆಸ್ಟೀಜ್ ಸೌತ್ ರಿಡ್ಜ್ ಅಪಾರ್ಟ್‌ಮೆಂಟ್‌ನಲ್ಲಿ ಮನೆಯಿಂದ ಹೊರಬಂದಿಲ್ಲ. ಸುಪ್ರೀಂ ತೀರ್ಪಿನ ನಂತರ ಅವರ ಆತಂಕ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
ಈ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ಜಾಮೀನನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇಂದು ತೀರ್ಪು ಪ್ರಕಟಿಸಿ, ಜಾಮೀನು ರದ್ದುಗೊಳಿಸಿದೆ. ಇದರಿಂದ ಪ್ರಕರಣದಲ್ಲಿ ಮತ್ತೊಂದು ತಿರುವು ಉಂಟಾಗಿದೆ ಮತ್ತು ದರ್ಶನ್ ಅವರ ಅಜ್ಞಾತ ಸ್ಥಳ ಪ್ರವಾಸ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.