‘ಡೆವಿಲ್’ ನಿರ್ದೇಶಕ ಪ್ರಕಾಶ್ ಮೊಬೈಲ್ ಸ್ವಿಚ್ ಆಫ್ – ಚಿನ್ನೇಗೌಡ ಬೇಸರ ವ್ಯಕ್ತಪಡಿಸಿದರು!


ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿದ್ದ ‘ಡೆವಿಲ್’ ಸಿನಿಮಾ ಇದೀಗ ತಾತ್ಕಾಲಿಕ ತೊಂದರೆ ಎದುರಿಸುತ್ತಿದೆ. ಕಾರಣ, ಚಿತ್ರದ ನಾಯಕ ದರ್ಶನ್ ಬಂಧನ. ಇದರ ಪರಿಣಾಮವಾಗಿ ಜುಲೈ 15ರಂದು ರಿಲೀಸ್ ಆಗಬೇಕಿದ್ದ ‘ಇದ್ರೆ ನೆಮ್ದಿಯಾಗ್ ಇರ್ಬೇಕ್’ ಹಾಡಿನ ಬಿಡುಗಡೆ ಮುಂದೂಡಲ್ಪಟ್ಟಿದೆ.
‘ಡೆವಿಲ್’ ಚಿತ್ರದ ಮೊದಲ ಹಾಡು ಬಿಡುಗಡೆ ಬಗ್ಗೆ ದರ್ಶನ್ ಸ್ವತಃ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದರು. ಆದರೆ ಅದಕ್ಕೂ ಮುನ್ನವೇ ಅವರ ಬಂಧನ ನಡೆಯಿತು. ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದ ಹಿನ್ನೆಲೆಯಲ್ಲಿ ದರ್ಶನ್ ಮತ್ತೆ ಜೈಲು ಸೇರುವಂತಾಯಿತು. ಈ ಬೆಳವಣಿಗೆ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ.
ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಪ್ರಕಾಶ್, ದರ್ಶನ್ ಬಂಧನದ ನಂತರ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಇದನ್ನು ಹಿರಿಯ ನಿರ್ಮಾಪಕ ಚಿನ್ನೇಗೌಡ ಅವರು ದೃಢಪಡಿಸಿದ್ದಾರೆ. “ಸಾಂಗ್ ಇಂದು ರಿಲೀಸ್ ಆಗಬೇಕಿತ್ತು, ಆದರೆ ಆಗಲಿಲ್ಲ. ಪ್ರಕಾಶ್‌ಗೆ ಕರೆ ಮಾಡಿದೆ, ಸ್ವಿಚ್ ಆಫ್ ಬರುತ್ತಿದೆ. ಅವರಿಗೂ ನೋವು ತಂದಿರುತ್ತದೆ” ಎಂದು ಅವರು ತಿಳಿಸಿದ್ದಾರೆ.
ದರ್ಶನ್ ಕುಟುಂಬದೊಂದಿಗೆ ಹತ್ತಿರದ ಬಾಂಧವ್ಯ ಹೊಂದಿರುವ ಚಿನ್ನೇಗೌಡ ಅವರು, “ದರ್ಶನ್ ಒಳ್ಳೆಯ ವ್ಯಕ್ತಿ. ನಮ್ಮನ್ನು ಕಂಡರೆ ಯಾವಾಗಲೂ ಗೌರವ ಕೊಡುತ್ತಿದ್ದ. ಈಗ ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಕಾನೂನಿಗೆ ತಲೆಬಾಗಲೇಬೇಕು” ಎಂದು ಹೇಳಿದ್ದಾರೆ. ಜೊತೆಗೆ, ಪ್ರಕಾಶ್ ಸಾಕಷ್ಟು ಹಣ ಖರ್ಚು ಮಾಡಿ ಸಿನಿಮಾ ಮಾಡಿದಿದ್ದಾರೆ. ಅದನ್ನು ರಿಲೀಸ್ ಮಾಡಲೇಬೇಕು. ಸಿನಿಮಾ ಒಳ್ಳೆಯ ರೀತಿಯಲ್ಲಿ ಮೂಡಿ ಬಂದಿದೆ ಎಂದೂ ಹೇಳಿದ್ದಾರೆ.
‘ಡೆವಿಲ್’ ಚಿತ್ರದ ಶೂಟಿಂಗ್ ಮುಗಿದಿದ್ದು, ರಿಲೀಸ್‌ಗೂ ಸಿದ್ಧವಾಗಿದೆ. ಆದರೆ ದರ್ಶನ್ ಬಂಧನದಿಂದಾಗಿ ಚಿತ್ರದ ಪ್ರಚಾರ ಮತ್ತು ಹಾಡು ಬಿಡುಗಡೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಚಿನ್ನೇಗೌಡ ಅವರು, “ಪ್ರಕಾಶ್ ಸುದ್ದಿಗೋಷ್ಠಿ ಮಾಡಲಿ, ಸಿನಿಮಾವನ್ನು ಒಳ್ಳೆಯ ರೀತಿಯಲ್ಲಿ ಮುನ್ನಡೆಸಲಿ” ಎಂದು ಸಲಹೆ ನೀಡಿದ್ದಾರೆ. ದರ್ಶನ್ ಕಾನೂನು ಹೋರಾಟದ ನಡುವೆ ‘ಡೆವಿಲ್’ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂಬುದರ ಕುರಿತು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.