Back to Top

‘ಕೂಲಿ’ ಟಿಕೆಟ್ ಬೆಲೆ 400ರಿಂದ 1000 ರೂ.ವರೆಗೆ! ಸರ್ಕಾರದಿಂದ 200 ರೂ. ಮಿತಿ ಶೀಘ್ರ ಜಾರಿ?

SSTV Profile Logo SStv August 13, 2025
‘ಕೂಲಿ’ ಟಿಕೆಟ್ ಮೇಲೆ ಸರ್ಕಾರದ ಗರಿಷ್ಠ ದರ ಮಿತಿ ಬರಲಿದೆ
‘ಕೂಲಿ’ ಟಿಕೆಟ್ ಮೇಲೆ ಸರ್ಕಾರದ ಗರಿಷ್ಠ ದರ ಮಿತಿ ಬರಲಿದೆ

ಬೆಂಗಳೂರು ಪ್ರೇಕ್ಷಕರು ಈಗ ಸಿನಿಮಾ ಪ್ರೀತಿಗೆ ಪರ್ಸ್ ಸುಡಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ರಜನಿಕಾಂತ್, ಉಪೇಂದ್ರ, ಆಮಿರ್ ಖಾನ್ ಮುಂತಾದ ಸ್ಟಾರ್ ಹೀರೋಗಳ ಅಬ್ಬರದ ‘ಕೂಲಿ’ ಸಿನಿಮಾ ನಗರದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಟಿಕೆಟ್ ದರ 400 ರೂಪಾಯಿಯಿಂದ 1500 ರೂಪಾಯಿವರೆಗೆ ಏರಿಕೆಯಾಗಿದೆ. ಇದರಿಂದ ಪ್ರೇಕ್ಷಕರು ಗರಂ ಆಗಿದ್ದಾರೆ.

ಇದಕ್ಕೆ ಮತ್ತೊಂದು ಕಾರಣ, ಹಲವೆಡೆಗಳಲ್ಲಿ ‘ಸು ಫ್ರಮ್ ಸೋ’ ಚಿತ್ರ ಪ್ರದರ್ಶನವನ್ನು ನಿಲ್ಲಿಸಿ, ‘ಕೂಲಿ’ ಮತ್ತು ‘ವಾರ್ 2’ ಚಿತ್ರಗಳಿಗೆ ಆದ್ಯತೆ ನೀಡಿರುವುದು. ಕನ್ನಡಿಗರಲ್ಲಿ ಇದು ಬೇಸರ ಮೂಡಿಸಿದೆ. ವಿಶೇಷವಾಗಿ, ‘ಸು ಫ್ರಮ್ ಸೋ’ ಚಿತ್ರ ಉತ್ತಮ ಪ್ರತಿಕ್ರಿಯೆ ಪಡೆದು, 100 ಕೋಟಿ ಕ್ಲಬ್ ಸೇರುವ ಮುನ್ಸೂಚನೆ ತೋರಿಸುತ್ತಿರುವ ಸಂದರ್ಭದಲ್ಲಿ ಈ ರೀತಿಯ ಕ್ರಮಕ್ಕೆ ಪ್ರೇಕ್ಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಈ ಗೊಂದಲದ ನಡುವೆ ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಒಂದು ಸಿಹಿ ಸುದ್ದಿ ನೀಡಿದ್ದಾರೆ. ಸರ್ಕಾರ ಶೀಘ್ರದಲ್ಲೇ ಸಿನಿಮಾ ಟಿಕೆಟ್ ದರಕ್ಕೆ ಮಿತಿ ವಿಧಿಸಲು ಸಿದ್ಧತೆ ನಡೆಸುತ್ತಿದ್ದು, ಗರಿಷ್ಠ ದರ 200 ರೂಪಾಯಿಗೆ ಮಿತಿ ಇಡಲಾಗುವ ಸಾಧ್ಯತೆ ಇದೆ. ಈ ಆದೇಶದ ಬಗ್ಗೆ ವಿರೋಧವಿದ್ದರೆ, ಅದನ್ನು ತಿಳಿಸಲು ಸರ್ಕಾರ ಸೂಚಿಸಿದೆ.

ನರಸಿಂಹಲು ಅವರ ಪ್ರಕಾರ, ಈ ಆದೇಶ ಮುಂದಿನ ಎರಡು-ಮೂರು ದಿನಗಳಲ್ಲಿ ಜಾರಿಯಾಗುವ ನಿರೀಕ್ಷೆ ಇದೆ. ಆದೇಶ ಜಾರಿಗೆ ಬಂದರೆ ಪ್ರೇಕ್ಷಕರು ನಿಟ್ಟುಸಿರು ಬಿಡಲಿದ್ದಾರೆ, ಏಕೆಂದರೆ ಪ್ರಸ್ತುತ ವಾರಾಂತ್ಯದಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ ತೆರಿಗೆ ಸೇರಿ ಮತ್ತಷ್ಟು ಹೆಚ್ಚುತ್ತಿದೆ.

ಸರ್ಕಾರದ ಈ ಕ್ರಮ ಜಾರಿಯಾದರೆ, ಸಿನಿಮಾ ಪ್ರಿಯರಿಗೆ ಖಂಡಿತಾ ಬಂಪರ್ ಗಿಫ್ಟ್ ಆಗಲಿದೆ. ಆದರೆ ‘ಸು ಫ್ರಮ್ ಸೋ’ ಶೋಗಳನ್ನು ಕಡಿಮೆ ಮಾಡಿ, ಬೇರೆ ಭಾಷಾ ಚಿತ್ರಗಳಿಗೆ ಹೆಚ್ಚು ಆದ್ಯತೆ ನೀಡುತ್ತಿರುವ ವಿಚಾರವನ್ನು ಕನ್ನಡಿಗರು ಗಂಭೀರವಾಗಿ ಗಮನಿಸುತ್ತಿದ್ದಾರೆ.