"ನನ್ನ ಬಾಷಾಕ್ಕಿಂತ ‘ಓಂ’ 10 ಪಟ್ಟು ದೊಡ್ಡದು" – ರಜನಿಕಾಂತ್ ಉಪೇಂದ್ರಗೆ ಭಾರಿ ಮೆಚ್ಚುಗೆ


ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹು ನಿರೀಕ್ಷಿತ ‘ಕೂಲಿ’ ಸಿನಿಮಾದಲ್ಲಿ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ರಜನಿಕಾಂತ್ ಉಪೇಂದ್ರ ಕುರಿತು ಮೆಚ್ಚುಗೆಯ ಮಾತುಗಳನ್ನು ಹಂಚಿಕೊಂಡಿದ್ದು, ಆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರದಲ್ಲಿ ಉಪೇಂದ್ರ ಅವರು "ಕಲೀಶ" ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಮಾತನಾಡಿದ ರಜನಿಕಾಂತ್, “ಭಾರತದ ಅತ್ಯಂತ ಬುದ್ಧಿವಂತ ನಿರ್ದೇಶಕರಿಗೆ ಸ್ಪೂರ್ತಿಯಾದ ವ್ಯಕ್ತಿ ಉಪೇಂದ್ರ. ಮಲಯಾಳಂ, ಹಿಂದಿ, ತೆಲುಗು, ತಮಿಳು ಎಲ್ಲ ಭಾಷೆಯವರಿಗೂ ಉಪ್ಪಿ ಸ್ಪೂರ್ತಿ. ಮೂಲತಃ ಅವರು ನಿರ್ದೇಶಕರು, ಆದರೆ ನಟನಾಗಿ ಮಾಡಿದ ಪ್ರತಿ ಪಾತ್ರವೂ ವಿಭಿನ್ನ” ಎಂದು ಹೊಗಳಿದರು.
ಅವರು ಮುಂದುವರಿಸಿ, “ಉಪೇಂದ್ರ ನಿರ್ದೇಶಿಸಿದ ‘ಓಂ’ ಚಿತ್ರ ಕರ್ನಾಟಕದಲ್ಲಿ ‘ಬಾಷಾ’ ಸಿನಿಮಾದಿಗಿಂತ 10 ಪಟ್ಟು ದೊಡ್ಡದು. ಈಗ ಲೋಕೇಶ್ ಕನಕರಾಜ್ ಬಳಸುತ್ತಿರುವ ನಾನ್-ಲೀನಿಯರ್ ಟೆಕ್ನಿಕ್ ಅನ್ನು ಉಪೇಂದ್ರ ಅಂದೇ ಮಾಡಿದ್ದಾರೆ” ಎಂದು ಹೇಳಿದರು. ರಜನಿಕಾಂತ್ ಅವರ ಈ ಮಾತುಗಳಿಗೆ ಪ್ರತಿಕ್ರಿಯಿಸಿದ ಉಪೇಂದ್ರ, “25 ವರ್ಷಗಳ ಹಿಂದೆ ತಲೈವಾ ಅವರನ್ನು ಭೇಟಿಯಾದ ಕ್ಷಣವನ್ನು ಮರೆಯಲು ಸಾಧ್ಯವಿಲ್ಲ. ಏಕಲವ್ಯ ದ್ರೋಣಾಚಾರ್ಯರನ್ನು ಹೇಗೆ ಫಾಲೋ ಮಾಡುತ್ತಾನೋ, ಹಾಗೆಯೇ ನಾನು ರಜನಿಕಾಂತ್‌ರನ್ನು ಫಾಲೋ ಮಾಡಿದ್ದೇನೆ. ಈಗ ಈ ದ್ರೋಣಾಚಾರ್ಯ ತಮ್ಮ ಬೆರಳು ಹಿಡಿದು ‘ಕೂಲಿ’ ಪ್ರಪಂಚಕ್ಕೆ ಕರೆದುಕೊಂಡು ಬಂದಿದ್ದಾರೆ” ಎಂದು ಸಂತಸ ಹಂಚಿಕೊಂಡರು.
ಸನ್ ಪಿಕ್ಚರ್ಸ್ ನಿರ್ಮಾಣದ ‘ಕೂಲಿ’ ಸಿನಿಮಾದಲ್ಲಿ ಶ್ರುತಿ ಹಾಸನ್, ನಾಗಾರ್ಜುನ, ಆಮಿರ್ ಖಾನ್, ಸತ್ಯರಾಜ್ ಸೇರಿದಂತೆ ಹಲವಾರು ತಾರೆಗಳು ನಟಿಸಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಸಿನಿಮಾ ಆಗಸ್ಟ್ 14ರಂದು ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಬಾರಿ ರಜನಿಕಾಂತ್ ಮತ್ತು ಉಪೇಂದ್ರ ಅವರ ಜೋಡಿ ಪರದೆ ಮೇಲೆ ಕಾಣಿಸಿಕೊಳ್ಳುವುದು ಕನ್ನಡ ಹಾಗೂ ತಮಿಳು ಪ್ರೇಕ್ಷಕರಿಗೆ ಖಂಡಿತಾ ಹಬ್ಬದ ಸಂಭ್ರಮ ತರಲಿದೆ.