ಚಂದಾಪುರದಲ್ಲಿ ನಿರ್ಮಾಪಕ ಎಸ್.ವಿ. ಬಾಬು ಅವರಿಂದ ದೇಗುಲ ನಿರ್ಮಾಣ


ಕನ್ನಡದಲ್ಲಿ ‘ಜೋಶ್’, ‘ಸವಿಸವಿ ನೆನಪು’, ‘ಹನಿಮೂನ್ ಎಕ್ಸ್ ಪ್ರೆಸ್ ಮುಂತಾದ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿರುವ ನಿರ್ಮಾಪಕ ಮತ್ತು ಖ್ಯಾತ ಉದ್ಯಮಿ ಎಸ್.ವಿ. ಬಾಬು, ಚಂದಾಪುರದಲ್ಲಿರುವ ಜಿ.ಪಿ.ಆರ್. ಗ್ರಾಂಡೆ ಲೇಔಟ್‍ನಲ್ಲಿ ಶ್ರೀ ಮಹಾಗಣಪತಿ, ಶ್ರೀ ವೆಂಕಟೇಶ್ವರ ಮತ್ತು ಶ್ರೀ ಲಕ್ಷ್ಮೀ, ಪದ್ಮಾವತಿ ದೇವಿ ದೇವಸ್ಥಾನವನ್ನು ಕಟ್ಟಿಸಿದ್ದು, ಈ ದೇವಸ್ಥಾನದ ಪ್ರಾಣ ಪ್ರತಿಷ್ಠಪನಾ ಮಹೋತ್ಸವ ಇತ್ತೀಚೆಗೆ ನಡೆದಿದೆ. ಸುಮಾರು ಎಂಟು ಸಾವಿರ ಚದುರಡಿ ವಿಸ್ತೀರ್ಣದಲ್ಲಿ ಈ ಭವ್ಯ ದೇವಸ್ಥಾನದಲ್ಲಿ ಕಟ್ಟಲಾಗಿದೆ.
ಆಯೋಧ್ಯೆಯ ಶ್ರೀ ರಾಮ ಮಂದಿರ ದೇವಸ್ಥಾನದ ರಾಮ್ ಲಲ್ಲಾ ಮೂರ್ತಿಯನ್ನು ಕೆತ್ತಿರುವ ಮೈಸೂರಿನ ಅರುಣ್ ಯೋಗಿರಾಜ್ ಅವರ ತಂಡದವರು, ಈ ದೇವಸ್ಥಾನದ ಮೂರ್ತಿಗಳನ್ನು ಕೆತ್ತಿದ್ದಾರೆ. ಮೂರು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ನಡೆದ ದೇವಸ್ಥಾನ ಉದ್ಘಾಟನೆ ಮತ್ತು ಪ್ರಾಣ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಸಾವಿರಾರು ಜನ ಸಾಕ್ಷಿಯಾಗಿದ್ದು, ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ. ನರಸಿಂಹಲು, ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, ಕಾರ್ಯದರ್ಶಿ ಡಿ.ಕೆ. ರಾಮಕೃಷ್ಣ, ನಟಿಯರಾದ ಪ್ರಿಯಾ ಹಾಸನ್, ಕಾರುಣ್ಯ ರಾಮ್ ಮುಂತಾದವರು ಹಾಜರಿದ್ದರು.