"ಅಯ್ಯೋ ಹೋಗ್ರಿ ಸರ್!" – ಬಂಧನದ ವೇಳೆ ಕ್ಯಾಮೆರಾ ಕಂಡು ಪವಿತ್ರಾ ಗೌಡ ಫುಲ್ ಗರಂ


ಬೆಂಗಳೂರು, ಆ.14 – ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ ಏಳು ಮಂದಿಯ ಜಾಮೀನು ರದ್ದುಪಡಿಸಿದ ತೀರ್ಪು ಹೊರಬಿದ್ದ ಕ್ಷಣದಿಂದಲೇ, ಪೊಲೀಸರು ವಶಕ್ಕೆ ಪಡೆಯುವ ಕಾರ್ಯಾಚರಣೆ ಆರಂಭಿಸಿದರು. ಈ ಪೈಕಿ ರಾಜರಾಜೇಶ್ವರಿ ನಗರದಲ್ಲಿರುವ ಪವಿತ್ರಾ ಗೌಡ ಅವರ ಮನೆಯತ್ತವೂ ಪೊಲೀಸರು ಬೇಟಿ ನೀಡಿದರು.
ಆದೇಶ ಬರುವವರೆಗೂ ಮನೆಯ ಹೊರಗೆ ನಿಂತಿದ್ದ ಪೊಲೀಸರು, ವಶಕ್ಕೆ ಪಡೆಯುವ ಅನುಮತಿ ಸಿಕ್ಕ ತಕ್ಷಣವೇ ನೇರವಾಗಿ ಮನೆ ಒಳಗೆ ಪ್ರವೇಶಿಸಿ, ಪವಿತ್ರಾ ಗೌಡ ಅವರನ್ನು ಬಂಧಿಸಿ ಹೊರಗೆ ಕರೆದುಕೊಂಡು ಬಂದರು.
ಬಂಧನದ ವೇಳೆ ಮನೆಯ ಮೆಟ್ಟಿಲವರೆಗೆ ಒಬ್ಬರು ಮೊಬೈಲ್ ಕ್ಯಾಮೆರಾ ಹಿಡಿದು ವಿಡಿಯೋ ಮಾಡುತ್ತಿದ್ದನ್ನು ಕಂಡ ಪವಿತ್ರಾ ಗೌಡ ತೀವ್ರವಾಗಿ ಪ್ರತಿಕ್ರಿಯಿಸಿದರು. "ಅಯ್ಯೋ ಹೋಗ್ರಿ ಸರ್ ಆ ಕಡೆ!" ಎಂದು ರೇಗಾಡಿದ ದೃಶ್ಯಗಳು ಕಣ್ಣಿಗೆ ಬಿದ್ದವು. ಪೊಲೀಸರು ಆಕೆಯನ್ನು ಹಿಡಿದು ಕೋರ್ಟ್‌ಗೆ ಕರೆದೊಯ್ಯುವ ಜೀಪ್‌ವರೆಗೆ ತಲುಪಿಸಿದರು.
ಜಾಮೀನು ರದ್ದು ಎಂಬ ಸುದ್ದಿ ಬಂದ ತಕ್ಷಣ ಪವಿತ್ರಾ ಗೌಡ ಅವರ ಮನೆಯಲ್ಲೂ ಭಾವುಕ ವಾತಾವರಣ ನಿರ್ಮಾಣವಾಯಿತು. ಮಗಳು ತಾಯಿಯನ್ನು ತಬ್ಬಿಕೊಂಡು ಕಣ್ಣೀರಿಟ್ಟಳು. "ಅಮ್ಮ ಹೊರ ಬಂದ ಖುಷಿ 6 ತಿಂಗಳು ಕೂಡ ಇರಲಿಲ್ಲ" ಎನ್ನುವ ನೋವಿನಲ್ಲಿ ಮಗಳು ಮುಳುಗಿದ್ದಾಳೆ. ತಾಯಿಯನ್ನ ಮತ್ತೆ ಜೈಲಿಗೆ ಕಳುಹಿಸುವ ವಾಸ್ತವಿಕತೆಯು ಆ ಕುಟುಂಬದ ಮೇಲೆ ಭಾರವಾದ ನೆರಳನ್ನು ಬೀರಿದೆ.
ಪವಿತ್ರಾ ಗೌಡ ಅವರನ್ನು ಮೊದಲು ಕೋರ್ಟ್‌ಗೆ ಹಾಜರುಪಡಿಸಿ, ನಂತರ ಪರಪ್ಪನ ಅಗ್ರಹಾರ ಜೈಲಿಗೆ ಅಥವಾ ಬೇರೆ ಜೈಲಿಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ. ಇದೇ ವೇಳೆ, ಈ ಪ್ರಕರಣದಲ್ಲಿ ಇತರ ಆರೋಪಿಗಳಾದ ಎ4 ಪ್ರದೋಶ್, ಎ5 ನಾಗರಾಜ್ ಹಾಗೂ ಎ6 ಲಕ್ಷ್ಮಣ್ ಈಗಾಗಲೇ ಪೊಲೀಸರಿಗೆ ಸರೆಂಡರ್ ಆಗಿದ್ದಾರೆ.