ಭರ್ಜರಿ ಬ್ಯಾಚುಲರ್ಸ್ ಖ್ಯಾತಿಯ ರಮೋಲಾ ವಿರುದ್ಧ ನಿರ್ಮಾಪಕರ ದೂರು – ಫಿಲ್ಮ್ ಚೇಂಬರ್‌ನಲ್ಲಿ ಗೊಂದಲ


‘ಭರ್ಜರಿ ಬ್ಯಾಚುಲರ್ಸ್’ ರಿಯಾಲಿಟಿ ಶೋ ಮೂಲಕ ಮನೆಮಾತಾದ ರಮೋಲಾ, ಇದೀಗ ದೊಡ್ಡ ವಿವಾದದಲ್ಲಿ ಸಿಲುಕಿದ್ದಾರೆ. ತಮ್ಮ ಹೊಸ ಸಿನಿಮಾ ‘ರಿಚ್ಚಿ’ಗೆ ಪ್ರಮೋಷನ್ ಮಾಡುತ್ತಿಲ್ಲ ಎಂಬ ಕಾರಣಕ್ಕಾಗಿ, ಚಿತ್ರದ ನಿರ್ಮಾಪಕ ಮತ್ತು ನಟ ಹೇಮಂತ್ ರಿಚ್ಚಿ ಅವರು ಫಿಲ್ಮ್ ಚೇಂಬರ್‌ಗೆ ದೂರು ನೀಡಿದ್ದಾರೆ. ‘ರಿಚ್ಚಿ’ ಚಿತ್ರದಲ್ಲಿ ಮಾನ್ವಿತಾ ಹರೀಶ್ ಹಾಗೂ ರಮೋಲಾ ಇಬ್ಬರು ನಾಯಕಿಯರು. ಇವರಲ್ಲಿ ರಮೋಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿರುವಾಗ, ಅವರು ಪ್ರಮೋಷನ್ ಕಾರ್ಯಕ್ರಮಗಳಿಗೆ ಹಾಜರಾಗದೆ, ಯಾವುದೇ ರೀತಿಯ ಸಹಕಾರ ನೀಡುತ್ತಿಲ್ಲ ಎಂದು ನಿರ್ಮಾಪಕರು ಆರೋಪ ಮಾಡಿದ್ದಾರೆ.
“ಒಬ್ಬ ನಿರ್ಮಾಪಕನು ಕಷ್ಟಪಟ್ಟು ಸಿನಿಮಾ ಮಾಡುತ್ತಾನೆ. ಪ್ರಚಾರ ಮಾಡಿದ್ರೆ ಮಾತ್ರ ಚಿತ್ರ ಜನರಿಗೆ ತಲುಪುತ್ತದೆ. ಆದರೆ ರಮೋಲಾ ಅವರು ಕಾಲ್ ಪಿಕ್ ಮಾಡ್ತಿಲ್ಲ, ರೆಸ್ಪಾನ್ಸ್ ಕೊಡ್ತಿಲ್ಲ. ಇದು ಅವರ ಸಿನಿಮಾ, ಹೀಗಿರಲು ಆಸಕ್ತಿ ತೋರಿಸದೇ ಹೋದರೆ ಹೇಗೆ?” ಚಿತ್ರದ ಶೂಟಿಂಗ್ ವೇಳೆ ಎಲ್ಲವೂ ಸರಾಗವಾಗಿದ್ದರೂ, ನಂತರದಲ್ಲಿ ರಮೋಲಾ ಅವರ ವರ್ತನೆ ಬದಲಾಗಿದೆಯಂತೆ. ಪ್ರಮೋಷನ್ ಕುರಿತಂತೆ ಹಲವು ಬಾರಿ ಕರೆ ಮಾಡಿದರೂ, ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ನಿರ್ಮಾಪಕರು ಮಾಧ್ಯಮಗಳ ಮುಂದೆ ಬೇಸರ ವ್ಯಕ್ತಪಡಿಸಿದ್ದಾರೆ.
“ಕಾಲ್ ಪಿಕ್ ಮಾಡಿ, ಬರಲಾರೆ ಎಂದು ಹೇಳಿದ್ರು ಸಾಕಿತ್ತು. ಆದರೆ ಇದು ಸಂಪೂರ್ಣ ಮೌನ. ಸಿನಿಮಾ ಪ್ರಚಾರ ಮಾಡೋದ್ರಿಂದ ನಿರ್ಮಾಪಕ ಮಾತ್ರವಲ್ಲ, ಇಡೀ ತಂಡ ಗೆಲ್ಲುತ್ತದೆ. ರಮೋಲಾ ಅವರ ನಿರ್ಲಕ್ಷ್ಯ ಎಲ್ಲರಿಗೂ ನೋವು ತಂದಿದೆ.” ಈ ಘಟನೆ ಹಿನ್ನೆಲೆಯಲ್ಲಿ ನಿರ್ಮಾಪಕರು ಫಿಲ್ಮ್ ಚೇಂಬರ್ ಅಧ್ಯಕ್ಷರ ಬಳಿ ದೂರು ಸಲ್ಲಿಸಿದ್ದು, ಚೇಂಬರ್ ಮಧ್ಯಸ್ಥಿಕೆ ವಹಿಸುವ ಭರವಸೆ ನೀಡಿದೆಯಂತೆ. ರಮೋಲಾ ಅವರನ್ನು ಕರೆಯಿಸಿ ಮಾತನಾಡುವುದಾಗಿ ಅಧ್ಯಕ್ಷರು ತಿಳಿಸಿರುವುದಾಗಿ ಹೇಮಂತ್ ರಿಚ್ಚಿ ಹೇಳಿದ್ದಾರೆ.
‘ರಿಚ್ಚಿ’ ಚಿತ್ರವನ್ನು ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿಸಲು ತಂಡ ಸಜ್ಜಾಗುತ್ತಿದೆ. ಆದರೆ ಪ್ರಮುಖ ನಾಯಕಿ ಪ್ರಮೋಷನ್ ಕಾರ್ಯಕ್ರಮಗಳಿಂದ ದೂರವಿರುವುದು, ಚಿತ್ರದ ಪಬ್ಲಿಸಿಟಿ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ರಮೋಲಾ ಅವರ ಈ ವರ್ತನೆಯ ಹಿಂದೆ ನಿಜವಾದ ಕಾರಣವೇನು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಸಿನಿಮಾ ಬಿಡುಗಡೆಯ ಹಂತದಲ್ಲಿ ಇಂತಹ ತೊಂದರೆಗಳು ಎದುರಾಗುತ್ತಿರುವುದು ನಿರ್ಮಾಪಕರಿಗೆ ತಲೆನೋವನ್ನು ತಂದಿದೆ. ಈಗ ಫಿಲ್ಮ್ ಚೇಂಬರ್ ಮಾತುಕತೆ ಬಳಿಕ ಏನು ತೀರ್ಮಾನವಾಗುತ್ತದೆ ಎಂಬುದನ್ನು ಎಲ್ಲರೂ ಕಾದು ನೋಡುತ್ತಿದ್ದಾರೆ.