ಅಪಾರ್ಟ್‌ಮೆಂಟ್ ಮುಂದೆ ಕಾದ ಪೊಲೀಸರು; ಮಗನಿಗಾಗಿ ಹಿಂಬದಿ ಗೇಟ್‌ನಿಂದ ಎಂಟ್ರಿ ಕೊಟ್ಟ ದರ್ಶನ್!


ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಗೆ ಬಂದಿದ್ದ ನಟ ದರ್ಶನ್ ಹಾಗೂ ಇತರ ಆರೋಪಿಗಳ ಜಾಮೀನು, ಸ್ವಾತಂತ್ರ್ಯ ದಿನಾಚರಣೆಯ ಮುನ್ನದಿನವೇ ಸುಪ್ರೀಂ ಕೋರ್ಟ್ ರದ್ದುಪಡಿಸಿತು. ಕೂಡಲೇ ಶರಣಾಗುವಂತೆ ಆದೇಶ ಹೊರಬಂದ ಕಾರಣ, ದರ್ಶನ್ ತಮಿಳುನಾಡಿನಿಂದ ಬೆಂಗಳೂರಿಗೆ ವಾಪಸ್ಸಾಗಬೇಕಾಯಿತು. ಆದರೆ, ಬಂಧನಕ್ಕೂ ಮುನ್ನ ನಟ ದರ್ಶನ್ ಮಾಡಿದ ಒಂದು ನಡೆ ಇದೀಗ ಸ್ಯಾಂಡಲ್‌ವುಡ್ ಹಾಗೂ ಅಭಿಮಾನಿಗಳ ನಡುವೆ ಚರ್ಚೆಯ ವಿಷಯವಾಗಿದೆ.
ದರ್ಶನ್ ಬೆಂಗಳೂರಿಗೆ ಬಂದ ಕೂಡಲೇ ಪೊಲೀಸರು ಅವರ ಬಂಧನಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಹಿರಿಯ ಅಧಿಕಾರಿಗಳಿಂದ "ಕಂಡ ತಕ್ಷಣ ಬಂಧಿಸಿ" ಎಂಬ ಸೂಚನೆ ಕೂಡ ಬಂದಿತ್ತು. ಆದರೆ, ಕಾರಿನಲ್ಲಿದ್ದ ನಟ ಕಾಣೆಯಾಗಿಬಿಟ್ಟಾರೆಯೇ? ಎಂಬ ಮಟ್ಟಿಗೆ ಕೆಲ ಕ್ಷಣ ಗೊಂದಲ ಉಂಟಾಯಿತು. ಸಮೀಪವರ್ತಿಗಳ ಮಾಹಿತಿ ಪ್ರಕಾರ, ದರ್ಶನ್ ತಮ್ಮ ಗೆಳೆಯ ಹಾಗೂ ನಟ ಧನ್ವೀರ್ ಅವರನ್ನು ಕರೆ ಮಾಡಿ, "ಮಗನನ್ನ ಹಾಗೂ ಕುಟುಂಬವನ್ನು ನೋಡಬೇಕು, ಸ್ವಲ್ಪ ಸಮಯ ಕೊಡಿ" ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ, ಪೊಲೀಸರ ಪಾಲಿಗೆ ಸುಪ್ರೀಂ ಕೋರ್ಟ್ ಆದೇಶವೇ ಮುಖ್ಯ. ಅವರು ಕೂಡಲೇ ಬಂಧಿಸಬೇಕೆಂದು ನಿಂತಿದ್ದರು.
2:30ರ ಸುಮಾರಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ತಮ್ಮ ಅಪಾರ್ಟ್‌ಮೆಂಟ್‌ಗೆ ಬರಲಿದ್ದಾರೆ ಎಂದು ಧನ್ವೀರ್ ತಿಳಿಸಿದ್ರು. ಹೀಗಾಗಿ ಪೊಲೀಸರು ಅಪಾರ್ಟ್‌ಮೆಂಟ್ ಮುಂದೆ ಕಾಯುತ್ತಿದ್ದರು. ಆದರೆ, ದರ್ಶನ್ ನೇರವಾಗಿ ಮುಖ್ಯ ಗೇಟ್‌ನಿಂದ ಪ್ರವೇಶಿಸದೇ, ಹಿಂಬದಿ ಗೇಟ್ ಮೂಲಕ ಇನೋವಾ ಕಾರಿನಲ್ಲಿ ಒಳಗೆ ಪ್ರವೇಶಿಸಿದ್ದಾರೆ ಎನ್ನಲಾಗುತ್ತಿದೆ.
ಬಂಧನಕ್ಕೂ ಸುಮಾರು 15 ನಿಮಿಷಗಳ ಮುನ್ನ, ದರ್ಶನ್ ಅಪಾರ್ಟ್‌ಮೆಂಟ್‌ಗೆ ಎಂಟ್ರಿ ಕೊಟ್ಟು ಮಗ ಹಾಗೂ ಪತ್ನಿಯನ್ನು ಭೇಟಿಯಾದರು. ಬಳಿಕ, ಅಪಾರ್ಟ್‌ಮೆಂಟ್ ಬಳಿ ಇದ್ದ ಇನ್ಸ್‌ಪೆಕ್ಟರ್ ನಾಗೇಶ್ ಅವರನ್ನೇ ಬಂಧನ ಕಾರ್ಯಾಚರಣೆಗೆ ಮುನ್ನಡೆಸಿದರು. ಕುಟುಂಬದ ಮುಂದೆಯೇ ಬಂಧನ ಪ್ರಕ್ರಿಯೆ ಮುಗಿಸಿ, ವೈದ್ಯಕೀಯ ಪರೀಕ್ಷೆ ಬಳಿಕ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ನಂತರ, ಕೋರ್ಟ್‌ಗೆ ಹಾಜರುಪಡಿಸಲಾಯಿತು.
ಈ ಘಟನೆ ಅಭಿಮಾನಿಗಳಲ್ಲಿ ಭಾವನಾತ್ಮಕ ಪ್ರತಿಕ್ರಿಯೆ ಮೂಡಿಸಿದ್ದು, "ಡೆವಿಲ್" ಹೃದಯ ಮಗನಿಗಾಗಿ ಮಿಡಿದದ್ದು ಎನ್ನುವ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.