"ಮಗನ ಚಿತ್ರದ ಪ್ರತಿ ಹಂತದಲ್ಲೂ ಇರುತ್ತೇನೆ, ಆದರೆ ನಟಿಸುವುದಿಲ್ಲ" – ಪ್ರಿಯಾಂಕಾ ಉಪೇಂದ್ರ


ಕನ್ನಡದ ಪ್ರತಿಭಾವಂತ ನಟಿ ಪ್ರಿಯಾಂಕಾ ಉಪೇಂದ್ರ ಅವರು ತಮ್ಮ ಸಿನಿಮಾ ಕರಿಯರ್ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸುತ್ತಾ, ಅನೇಕ ಚಿತ್ರಗಳಲ್ಲಿ ಬಿಝಿಯಾಗಿದ್ದಾರೆ. ಇತ್ತೀಚೆಗೆ ಅವರು ತಮ್ಮ ಪುತ್ರ ಆಯುಷ್ ಉಪೇಂದ್ರ ಅವರ ಚೊಚ್ಚಲ ಚಿತ್ರದ ಬಗ್ಗೆ ಹರ್ಷಭರಿತವಾಗಿ ಮಾತನಾಡಿದ್ದಾರೆ. ಪ್ರಿಯಾಂಕಾ ಉಪೇಂದ್ರ ಅವರು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿಯಾದಾಗಿನಿಂದಲೇ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದರು. ಹಲವಾರು ಸೂಪರ್‌ಸ್ಟಾರ್‌ಗಳ ಜೊತೆಗೆ ಕೆಲಸಮಾಡಿ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಮದುವೆಯ ನಂತರವೂ ಅವರು ತಮ್ಮ ಕುಟುಂಬ, ಮಕ್ಕಳು ಮತ್ತು ಸಿನಿಮಾ ಜೀವನವನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆ.
ಸದ್ಯ ಪ್ರಿಯಾಂಕಾ ಅಭಿನಯಿಸಿರುವ ಸಿನಿಮಾವೊಂದು ಬಿಡುಗಡೆಯಾಗುತ್ತಿದೆ. ಅದರ ಬೆನ್ನಲ್ಲೇ ಅವರ 50ನೇ ಸಿನಿಮಾ ಡಿಟೆಕ್ಟಿವ್ ತೀಕ್ಷ್ಣ, ವೈರಸ್, ಹಾಗೂ ನಿರ್ದೇಶಕ ಲೋಹಿತ್ ನಿರ್ದೇಶನದ ಕ್ಯಾಪ್ಚರ್ ಬಿಡುಗಡೆಯಾಗಲು ಸಜ್ಜಾಗಿದೆ. ಕನ್ನಡದ ಜೊತೆಗೇ ಅವರು ಹಿಂದಿ ಸಿನಿಮಾಗಳಲ್ಲಿಯೂ ತೊಡಗಿಸಿಕೊಂಡಿದ್ದು, ‘ಸೆಪ್ಟೆಂಬರ್ 21’ ಎಂಬ ಬಾಲಿವುಡ್ ಚಿತ್ರದಲ್ಲಿ ನಟಿಸಿದ್ದಾರೆ. 2013ರಲ್ಲಿ ಬಂದ ಎನಿಮಿ ನಂತರ 12 ವರ್ಷಗಳ ಬಳಿಕ ಹಿಂದಿ ಸಿನೆಮಾದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಸದ್ಯ ಈ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಡಬ್ಬಿಂಗ್ ಮಾತ್ರ ಬಾಕಿಯಿದೆ.
ಪ್ರಿಯಾಂಕಾ ಅವರ ಪುತ್ರ ಆಯುಷ್ ಉಪೇಂದ್ರ ಶೀಘ್ರದಲ್ಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಮಂತ್ರಾಲಯದಲ್ಲಿ ಸ್ಕ್ರಿಪ್ಟ್ ಪೂಜೆ ಮುಗಿದಿದ್ದು, ಫೋಟೋಶೂಟ್ ಕೂಡ ಪೂರ್ಣಗೊಂಡಿದೆ. ಸಿನಿಮಾ ಪೂಜೆ ನಂತರ ಶೂಟಿಂಗ್ ಆರಂಭವಾಗಲಿದೆ. ಈ ಬಗ್ಗೆ ಮಾತನಾಡಿದ ಪ್ರಿಯಾಂಕಾ, “ನಾನು ಮಗನ ಚಿತ್ರದಲ್ಲಿ ನಟಿಸುತ್ತಿಲ್ಲ. ಆದರೆ ಅಮ್ಮನಾಗಿ ಪ್ರತಿ ಹಂತದಲ್ಲೂ ಇರುತ್ತೇನೆ. ಸಿನಿಮಾದಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ. ಪಾಲಕರಾಗಿ ನಾನು ಮತ್ತು ಉಪೇಂದ್ರ ಎಷ್ಟು ಬೆಂಬಲ ನೀಡಬೇಕೋ ಅಷ್ಟು ಮಾಡುತ್ತಿದ್ದೇವೆ,” ಎಂದು ಹೇಳಿದ್ದಾರೆ.
ಆಯುಷ್ ಮಾತ್ರವಲ್ಲ, ಅವರ ಪುತ್ರಿ ಐಶ್ವರ್ಯಾ ಕೂಡ ಸಿನಿಮಾ ಕುರಿತ ಅಧ್ಯಯನ ಮಾಡುತ್ತಿದ್ದಾರೆ. ಇಬ್ಬರಿಗೂ ಕಥೆ ಬರೆಯುವುದು ಇಷ್ಟವಾಗಿದ್ದು, ಆಯುಷ್ ಅವರ ಮೊದಲ ಚಿತ್ರ ಕಥೆ ರೂಪಿಸುವ ಹಂತದಲ್ಲಿಯೇ ಇವರಿಬ್ಬರೂ ತೊಡಗಿಕೊಂಡಿದ್ದಾರೆ.
ತಮ್ಮ ಭವಿಷ್ಯದ ಬಗ್ಗೆ ಮಾತನಾಡಿದ ಪ್ರಿಯಾಂಕಾ, “ನನಗೆ ಸಿನಿಮಾ ನಿರ್ದೇಶನ ಮಾಡುವ ಪ್ಲಾನ್ ಇದೆ. ಆದರೆ ಈಗ ಮಗನ ಸಿನಿಮಾ ಲಾಂಚ್ ಇರುವುದರಿಂದ ಅದಕ್ಕೆ ಹೆಚ್ಚು ಗಮನ ಕೊಡುತ್ತಿದ್ದೇನೆ,” ಎಂದು ಹೇಳಿದ್ದಾರೆ. ಪ್ರಿಯಾಂಕಾ ಉಪೇಂದ್ರ ತಮ್ಮ ಸಿನಿ ಬದುಕಿನಲ್ಲಿ ಹೊಸ ಮೈಲಿಗಲ್ಲು ಸಾಧಿಸುತ್ತಿರುವುದರ ಜೊತೆಗೆ, ತಮ್ಮ ಪುತ್ರನ ಸಿನಿಮಾ ಪ್ರವೇಶಕ್ಕೂ ಸಕ್ರೀಯವಾಗಿ ಬೆಂಬಲ ನೀಡುತ್ತಿದ್ದಾರೆ. ಅಮ್ಮನಾಗಿ ಪ್ರತಿ ಹಂತದಲ್ಲಿ ಜೊತೆಯಿದ್ದರೂ, ಚಿತ್ರರಂಗದಲ್ಲಿ ಮಗ ತನ್ನದೇ ಆದ ಗುರುತು ಸಾಧಿಸಲಿ ಎಂಬುದೇ ಅವರ ಆಶಯ.