ಫೋನ್ ಸ್ವಿಚ್ ಆಫ್ ಮಾಡಿ ಓಡಿದ ದರ್ಶನ್ ಫ್ಯಾನ್ಸ್? ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದವರ ಮೇಲೆ ಭಾರೀ ಆಕ್ಷನ್!


ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಮತ್ತು ಅವಹೇಳನಾತ್ಮಕ ಸಂದೇಶಗಳು ಈಗ ಸಾಮಾನ್ಯವಾಗಿಬಿಟ್ಟಿದ್ದರೂ, ಇದಕ್ಕೆ ಧೈರ್ಯವಾಗಿ ಎದುರಿಸಿ ದೂರು ದಾಖಲಿಸಿರುವವರು ನಟಿ ಹಾಗೂ ಮಾಜಿ ಸಂಸದೆ ರಮ್ಯಾ. ಇತ್ತೀಚೆಗೆ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ತಮಗೆ ಅಶ್ಲೀಲ ಸಂದೇಶಗಳು ಬಂದ ಹಿನ್ನೆಲೆಯಲ್ಲಿ ರಮ್ಯಾ ನೇರವಾಗಿ ಪೊಲೀಸರಿಗೆ ದೂರು ನೀಡಿದ್ದರು.
ರಮ್ಯಾ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದು, ಇಲ್ಲಿಯವರೆಗೆ ಓಬಣ್ಣ, ಗಂಗಾಧರ್, ರಾಜೇಶ್, ಭುವನ್‍ಗೌಡ, ಮಂಜುನಾಥ್, ಪ್ರಮೋದ್‍ಗೌಡ ಹಾಗೂ ಸಂತೋಷ್ ಸೇರಿ ಏಳು ಮಂದಿಯನ್ನು ಬಂಧಿಸಿದ್ದಾರೆ. ಆದರೆ, ಇನ್ನು ಹಲವರು ತಮ್ಮ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ಮನೆ ಬಿಟ್ಟು ಓಡಿ ಹೋಗಿದ್ದಾರೆ ಎಂದು ರಮ್ಯಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಸಂದೇಶಗಳನ್ನು ಕಳುಹಿಸಿದವರು ನಿಜವಾಗಿಯೂ ದರ್ಶನ್ ಅಭಿಮಾನಿಗಳೇನಾ ಎಂಬುದರಲ್ಲಿ ಅನುಮಾನವಿದ್ದರೂ, ತಾವು ದರ್ಶನ್ ಅಭಿಮಾನಿಗಳೆಂದು ಹೇಳಿಕೊಂಡು ಕೆಲವರು ಅಶ್ಲೀಲ ಸಂದೇಶಗಳು, ಅವಹೇಳನ ಹಾಗೂ ಕೊಲೆ ಬೆದರಿಕೆ ನೀಡಿದ್ದರು ಎಂದು ರಮ್ಯಾ ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ರಮ್ಯಾ, “ಇವೆಲ್ಲಾ ಆದ ಮೇಲೆ ನನ್ನ ಕಾಮೆಂಟ್ ಸೆಕ್ಷನ್ ಈಗ ಸ್ವಚ್ಛ ಭಾರತ ಅಭಿಯಾನ ನಡೆದಂತೆ ಕ್ಲೀನ್ ಆಗಿದೆ. ಅಶ್ಲೀಲ ಕಾಮೆಂಟ್‌ಗಳು ಕಡಿಮೆಯಾಗಿವೆ. ಹೆಣ್ಣು ಮಕ್ಕಳಿಗೆ ಧೈರ್ಯ ಬಂದಿದೆ, ಇದು ನನಗೆ ಸಂತೋಷ ತಂದಿದೆ.” ಅವರು ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
ಅಶ್ಲೀಲ ಸಂದೇಶ ಕಳುಹಿಸುವವರ ಬಗ್ಗೆ ಪ್ರತಿಕ್ರಿಯಿಸಿದ ರಮ್ಯಾ, “ಮೊದಲು ನಿಮ್ಮ ಬದುಕಿನಲ್ಲಿ ಏನಾದರೂ ಮಾಡಿ. ಹೆಣ್ಣು ಮಕ್ಕಳನ್ನೂ, ನಿಮ್ಮ ತಂದೆ-ತಾಯಿಯನ್ನೂ ಗೌರವಿಸುವುದನ್ನು ಕಲಿಯಿರಿ. ಕೆಲಸ ಇಲ್ಲದೇ ಖಾಲಿ ಕುಳಿತರೆ ಕೆಟ್ಟ ಆಲೋಚನೆಗಳು ಬರುತ್ತವೆ, ಜೀವನದಲ್ಲಿ ಬ್ಯುಸಿಯಾಗಿರಿ.”
ಮೂಲ ದೂರುದಲ್ಲಿ 43 ಅಕೌಂಟ್‌ಗಳ ಹೆಸರು ನೀಡಿದ್ದ ರಮ್ಯಾ, ನಂತರ ಮತ್ತೆ 5 ಅಕೌಂಟ್‌ಗಳನ್ನು ಸೇರಿಸಿ ಒಟ್ಟು 48 ಅಕೌಂಟ್‌ಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಪ್ರಕರಣವು ಕೇವಲ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಸಂದೇಶಗಳ ವಿರುದ್ಧ ಹೋರಾಟವಲ್ಲ, ಬದಲಾಗಿ ಹೆಣ್ಣುಮಕ್ಕಳಿಗೆ ಧೈರ್ಯ ತುಂಬಿದ ಉದಾಹರಣೆಯಾಗಿದೆ. ಕಾನೂನು ಮುಂದೆ ಯಾರೇ ಆಗಲಿ ತಪ್ಪಿತಸ್ಥರೇ ಹೊರತು ಅಭಿಮಾನಿಗಳಲ್ಲ ಎಂಬುದನ್ನು ಈ ಪ್ರಕರಣ ಮತ್ತೊಮ್ಮೆ ನೆನಪಿಸಿದೆ.