ಅಪ್ಪು 3ನೇ ಪುಣ್ಯಸ್ಮರಣೆ ಕರಗದ ಅಭಿಮಾನಿಗಳ ನೋವು


ಅಪ್ಪು 3ನೇ ಪುಣ್ಯಸ್ಮರಣೆ ಕರಗದ ಅಭಿಮಾನಿಗಳ ನೋವು ಅಭಿಮಾನಿಗಳ ಹೃದಯದಲ್ಲಿ ಪ್ರೀತಿಯಿಂದ ನೆಲೆಸಿರುವ ಪುನೀತ್ ರಾಜ್‌ಕುಮಾರ್ ಅವರು ಕಣ್ಮರೆಯಾಗಿ ಇಂದಿಗೆ 3 ವರ್ಷ. ಅ. 29, 2021ರಂದು ಅಪ್ಪು ಹೃದಯಾಘಾತದಿಂದ ನಿಧನರಾಗಿದ್ದು, ಇದು ಕರುನಾಡಿನ ಜನತೆಗೆ ಆಘಾತವನ್ನುಂಟುಮಾಡಿತ್ತು. ತಮ್ಮ ಸರಳ ಮತ್ತು ಸ್ನೇಹಪರ ಸ್ವಭಾವದ ಮೂಲಕ ಕರ್ನಾಟಕದ ಮನೆಮಗನಾಗಿ ಎದ್ದುಬಂದ ಅಪ್ಪು, ತಮ್ಮ ಸಿನಿಮಾಗಳ ಮೂಲಕ ಅಭಿಮಾನಿಗಳ ಹೃದಯದಲ್ಲಿ ಅಳಿಸದ ನೆನಪನ್ನು ಬಿಟ್ಟಿದ್ದಾರೆ.
ಈ ದಿನದಂದು ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿಯ ಬಳಿ ಸ್ಮರಣೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸ್ಮಾರಕವನ್ನು ಬಿಳಿ ಹೂಗಳಿಂದ ಅಲಂಕರಿಸಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಬಂದ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ನಮನ ಸಲ್ಲಿಸುತ್ತಿದ್ದಾರೆ. ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಕುಟುಂಬ ಸದಸ್ಯರು ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ.
ಇದೀಗ ನಗರದ ಯಡಿಯೂರು ವಾರ್ಡ್‌ನಲ್ಲಿ ಪುನೀತ್ ರಾಜ್‌ಕುಮಾರ್ ಅವರ ಕಂಚಿನ ಪುತ್ಥಳಿಯನ್ನೂ ಲೋಕಾರ್ಪಣೆ ಮಾಡಲಾಗಿದೆ, ಇದರಿಂದ ಅಭಿಮಾನಿಗಳಿಗೆ ಅಪ್ಪುವಿನ ಸ್ಮರಣೆ ಮತ್ತಷ್ಟು ಆವರಿಸಿದೆ.