ಸಪ್ತ ಸಾಗರದ ಸುಂದರಿ ಈಗ ರಾಕಿ ಭಾಯ್ ಲೋಕದಲ್ಲಿ – ಟಾಕ್ಸಿಕ್ ವರ್ಲ್ಡ್‌ಗೆ ಎಂಟ್ರಿಯಾದರಾ ರುಕ್ಮಿಣಿ ವಸಂತ್?


ಕನ್ನಡದ ಸಪ್ತ ಸಾಗರದಾಚೆ ಸಿನಿಮಾದ ಮೂಲಕ ಅಭಿಮಾನಿಗಳ ಮನ ಗೆದ್ದ ರುಕ್ಮಿಣಿ ವಸಂತ್ ಈಗ ಮತ್ತೊಂದು ಬಿಗ್ ಆಫರ್ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ರಿಷಭ್ ಶೆಟ್ಟಿ ನಿರ್ದೇಶನದ ಕಾಂತಾರ 1 ನಲ್ಲಿ ಕನಕವತಿಯ ಪಾತ್ರದಲ್ಲಿ ಮಿಂಚಿದ ರುಕ್ಮಿಣಿ, ಇದೀಗ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ ಎಂಬ ಟಾಕ್ ಜೋರಾಗಿದೆ.
ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ, KVN ಬ್ಯಾನರ್‌ನಡಿ ಬಹು ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ ಸೇರಿ ತಾರಾಬಳಗವೇ ಇದೆ. ಇಂತಹ ಸಂದರ್ಭದಲ್ಲಿ ರುಕ್ಮಿಣಿ ಎಂಟ್ರಿ ಕುತೂಹಲಕ್ಕೆ ಕಾರಣವಾಗಿದೆ. ರುಕ್ಮಿಣಿ ಈಗಾಗಲೇ ಡ್ರಾಗನ್ ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್ ಜೊತೆ ಹಾಗೂ ಏಸ್ ನಲ್ಲಿ ವಿಜಯ್ ಸೇತುಪತಿ ಜೊತೆ ನಟಿಸಿದ್ದಾರೆ. ಹೀಗಾಗಿ ಕನ್ನಡದ ಈ ಸುಂದರ ನಟಿ ಇದೀಗ ದಕ್ಷಿಣದಷ್ಟೇ ಅಲ್ಲ, ಪ್ಯಾನ್ ಇಂಡಿಯಾ ಮಟ್ಟದಲ್ಲೂ ತನ್ನದೇ ಗುರುತು ಮೂಡಿಸುತ್ತಿದ್ದಾರೆ.
ಆದರೆ ಟಾಕ್ಸಿಕ್ ನಲ್ಲಿ ರುಕ್ಮಿಣಿಯ ಪಾತ್ರ ಪ್ರಮುಖವಾಗಿರುತ್ತದೆಯಾ ಅಥವಾ ಫ್ಲಾಶ್‌ಬ್ಯಾಕ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರಾ ಎಂಬ ಕುತೂಹಲ ಮುಂದುವರಿದಿದೆ. ಟೀಂ ಇನ್ನೂ ಅಧಿಕೃತ ಘೋಷಣೆ ನೀಡದ ಕಾರಣ ಅಭಿಮಾನಿಗಳು ಕಾಯಬೇಕಾಗಿದೆ. ಒಟ್ಟಿನಲ್ಲಿ, ಸಪ್ತ ಸಾಗರದಾಚೆಯ ಈ ಚೆಲುವೆ ಈಗ ಯಶ್ ಟಾಕ್ಸಿಕ್ ಲೋಕಕ್ಕೂ ಕಾಲಿಡಲಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಿಗೆ ಖುಷಿ ತಂದಿದೆ.