Back to Top

"ನಮ್ ಮನೆ ವಿಷಯಕ್ಕೆ ರಮ್ಯಾ ಯಾಕೆ? – ಮೊಮ್ಮಕ್ಕಳ ಬಗ್ಗೆ ಮಾತನಾಡಿದ್ರೆ ಮಕ್ಕುಗಿತ್ತೀನಿ" ಪುಷ್ಪಾ ಎಚ್ಚರಿಕೆ

SSTV Profile Logo SStv August 12, 2025
ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್, ರಮ್ಯಾ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ
ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್, ರಮ್ಯಾ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ

ಸೋಶಿಯಲ್ ಮೀಡಿಯಾ ಟ್ರೋಲ್‌ಗಳು, ಫ್ಯಾನ್ಸ್‌ವಾರ್‌ಗಳು, ಅಶ್ಲೀಲ ಕಾಮೆಂಟ್‌ಗಳು ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಈ ವಿಷಯಗಳು ಭಾರೀ ಚರ್ಚೆಯ ವಿಷಯವಾಗಿವೆ. ಈ ನಡುವೆ ನಟಿ ರಮ್ಯಾ ಇತ್ತೀಚೆಗೆ ಮಾಧ್ಯಮಗಳಲ್ಲಿ ಮಾತನಾಡಿ, ಕೆಲವರು ಯಶ್ ಮತ್ತು ಸುದೀಪ್ ಕುಟುಂಬಗಳ ಬಗ್ಗೆ, ವಿಶೇಷವಾಗಿ ಅವರ ಮಕ್ಕಳ ಕುರಿತು, ಕೆಟ್ಟದಾಗಿ ಕಾಮೆಂಟ್ ಮಾಡಿರುವ ಬಗ್ಗೆ ಖಂಡಿಸಿದ್ದರು. ಇಬ್ಬರ ಫ್ಯಾನ್ಸ್‌ವಾರ್ ವೇಳೆ ಈ ಘಟನೆ ನಡೆದಿದ್ದು, ತಾನು ಅದನ್ನು ಗಮನಿಸಿದ್ದಾಗಿ ಮತ್ತು ಅದರ ವಿರುದ್ಧ ನಿಂತಿರುವುದಾಗಿ ರಮ್ಯಾ ಹೇಳಿದ್ದರು.

ಈ ಹೇಳಿಕೆ ಕುರಿತು ಯಶ್ ಅವರ ತಾಯಿ ಹಾಗೂ ‘ಕೊತ್ತಲವಾಡಿ’ ಸಿನಿಮಾದ ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. “ಒಬ್ಬ ಮಹಿಳೆಯಾಗಿ ರಮ್ಯಾ ಈ ವಿಷಯದಲ್ಲಿ ನಿಂತಿದ್ದಾರೆ, ಅದು ಒಳ್ಳೆಯದು. ಆದರೆ ಎಲ್ಲರ ಬಗ್ಗೆ ಮಾತನಾಡುವಾಗ ಎಚ್ಚರ ವಹಿಸಬೇಕು. ಎಲ್ಲರೂ ಕೆಟ್ಟದಾಗಿ ಕಾಮೆಂಟ್ ಮಾಡಲ್ಲ, ಕೆಲವರು ಮಾತ್ರ ಮಾಡ್ತಾರೆ. ಯಾಕೆ ಬೇಕು ಹೀಗೆ? ಕರ್ನಾಟಕದ ಹೆಸರನ್ನು ಹಾಳು ಮಾಡ್ತೀರಾ? ವಿದ್ಯಾವಂತರಾದ ಮೇಲೆ ಹೀಗೆ ಮಾಡೋದು ಸರಿಯಲ್ಲ” ಎಂದು ಹೇಳಿದ್ದಾರೆ.

“ರಮ್ಯಾ ಬಂದು ನಮ್ ಮನೆ ವಿಷಯಕ್ಕೆ ಯಾಕೆ ಮಾತಾಡ್ಬೇಕು? ಯಶ್ ಮನೆಗೆ ಏನೂ ಆಗಬೇಕಿಲ್ಲ, ಆದರೂ ಅವರು ನಮ್ಮ ಮನೆಯ ಬಗ್ಗೆ ಮಾತನಾಡಿದ್ದಾರೆ. ನನಗೆ ಅದೇ ದಿನ ಗೊತ್ತಾಗಿದ್ದರೆ, ಆಗಲೇ ಟಿವಿಯಲ್ಲಿ ಕೂತು ಉತ್ತರ ಕೊಡ್ತಿದ್ದೆ. ನನ್ನ ಮೊಮ್ಮಕ್ಕಳ ಬಗ್ಗೆ ಯಾರಾದರೂ ಮಾತನಾಡಿದ್ರೆ, ಮಕ್ಕಳಿಗಿಂತ ಹೆಚ್ಚು ಕಷ್ಟ ಕೊಡ್ತೀನಿ. ನಾನು ಬದುಕಿರುವವರೆಗೂ ಅವರ ಬಗ್ಗೆ ಯಾರೂ ಕೆಟ್ಟದಾಗಿ ಮಾತಾಡಲು ಬಿಡಲ್ಲ. ತಪ್ಪು ಆಗಿದ್ದರೆ ಕ್ಷಮೆ ಕೇಳಿ, ಎಲ್ಲ ಬಿಟ್ಟುಬಿಡಿ” ಎಂದು ಎಚ್ಚರಿಸಿದ್ದಾರೆ.

ಇದೇ ವೇಳೆ, ಪುಷ್ಪಾ ಅರುಣ್ ಕುಮಾರ್ ಕನ್ನಡ ಚಿತ್ರರಂಗದ ಎಲ್ಲರಿಗೂ ಕಿವಿಮಾತು ನೀಡಿ, “ಇವತ್ತು ರಮ್ಯಾಗೆ ಮಾಡಿದ್ದೀರಾ, ನಾಳೆ ನನ್ನ ಸೊಸೆಗೆ ಮಾಡ್ತೀರಾ? ಯಾರೂ ಗ್ಯಾರಂಟಿ ಕೊಡಲ್ಲ. ನಿಮ್ಮ ಶತ್ರು ಆಗಿದ್ದರೂ ಕುಟುಂಬ, ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ” ಎಂದು ಮನವಿ ಮಾಡಿದ್ದಾರೆ. ಈ ಹೇಳಿಕೆಗಳು ಈಗ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಚರ್ಚೆಗೆ ಕಾರಣವಾಗಿದ್ದು, ಫ್ಯಾನ್ಸ್‌ವಾರ್‌ಗಳ ಗಡಿ ಎಲ್ಲಿದೆ ಎನ್ನುವ ಪ್ರಶ್ನೆಯೂ ಮತ್ತೆ ಮುಂದಕ್ಕೆ ಬಂದಿದೆ.