Back to Top

ರಿಷಬ್ ಶೆಟ್ಟಿ ಹುಟ್ಟೂರಿನಲ್ಲೇ ಸ್ವಾತಂತ್ರ್ಯೋತ್ಸವ: ಕೆರಾಡಿ ಸರ್ಕಾರಿ ಶಾಲೆಯಲ್ಲಿ ಧ್ವಜಾರೋಹಣ

SSTV Profile Logo SStv August 16, 2025
ರಿಷಬ್ ಶೆಟ್ಟಿ ಹುಟ್ಟೂರಿನಲ್ಲೇ ಸ್ವಾತಂತ್ರ್ಯೋತ್ಸವ
ರಿಷಬ್ ಶೆಟ್ಟಿ ಹುಟ್ಟೂರಿನಲ್ಲೇ ಸ್ವಾತಂತ್ರ್ಯೋತ್ಸವ

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ತಮ್ಮ ಹುಟ್ಟೂರಾದ ಕೆರಾಡಿಯಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು. ಕೆರಾಡಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಧ್ವಜಾರೋಹಣ ಮಾಡಿ, ಶಾಲಾ ಮಕ್ಕಳಿಗೆ ಶುಭ ಹಾರೈಸಿದರು. ತಮ್ಮ ಪತ್ನಿ ಪ್ರಗತಿ ಶೆಟ್ಟಿ, ಮಕ್ಕಳು ರನ್ವಿತ್ ಮತ್ತು ರಾಧ್ಯಾ ಅವರ ಜೊತೆಯಲ್ಲಿ ಹಾಜರಿದ್ದರು.

“ನನ್ನ ಕುಟುಂಬದೊಂದಿಗೆ ನಮ್ಮೂರಿನ ಕೆರಾಡಿ ಸರ್ಕಾರಿ ಶಾಲೆಯ ಮಕ್ಕಳ ಜೊತೆ ಸ್ವಾತಂತ್ರ್ಯೋತ್ಸವ. ಈ ಪುಟಾಣಿಗಳ ಭವಿಷ್ಯವೇ ನಮ್ಮ ಭಾರತದ ಭವಿಷ್ಯ” ಎಂದು ರಿಷಬ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ಕಾಸರಗೋಡು’ ಚಿತ್ರದ ಮೂಲಕ ಸರ್ಕಾರಿ ಶಾಲೆಗಳ ಉಳಿವಿನ ಬಗ್ಗೆ ಜಾಗೃತಿ ಮೂಡಿಸಿದ್ದ ರಿಷಬ್ ಶೆಟ್ಟಿ, ಕೇವಲ ಸಿನಿಮಾದಲ್ಲೇ ಅಲ್ಲ, ನಿಜ ಜೀವನದಲ್ಲೂ ಈ ಅಭಿಯಾನವನ್ನು ಮುಂದುವರಿಸಿದ್ದಾರೆ. ಕೆರಾಡಿಯ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯನ್ನು ದತ್ತು ತೆಗೆದುಕೊಂಡು ಅದರ ಅಭಿವೃದ್ಧಿಗೆ ಕೈಜೋಡಿಸಿರುವುದು ಅವರ ಸಮಾಜಮುಖಿ ಕೆಲಸಕ್ಕೆ ಸಾಕ್ಷಿ.

ಈಗಾಗಲೇ ‘ಕಾಂತಾರ: ಎ ಲೆಜೆಂಡ್ – ಚಾಪ್ಟರ್ 1’ ಚಿತ್ರದ ಶೂಟಿಂಗ್ ಮುಗಿದಿದ್ದು, ಅಕ್ಟೋಬರ್ 2, 2025ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ, ಮಲೆಯಾಳಂ, ಬೆಂಗಾಳಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಅರವಿಂದ್ ಎಸ್. ಕಶ್ಯಪ್ ಕ್ಯಾಮೆರಾ ಕಾರ್ಯ, ಬಿ. ಅಜನೀಶ್ ಲೋಕನಾಥ್ ಸಂಗೀತ ಮತ್ತು ವಿಜಯ್ ಕಿರಗಂದೂರು ನಿರ್ಮಾಣದಲ್ಲಿ ಈ ಭವ್ಯ ಚಿತ್ರ ಮೂಡಿಬಂದಿದೆ.

ರಿಷಬ್ ಶೆಟ್ಟಿ ಇತ್ತೀಚೆಗೆ ಚಿತ್ರ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿ, ದೈವ ಇಲ್ಲದೆ ಯಾವುದೂ ಸಾಧ್ಯವಿಲ್ಲ ಎಂಬ ಸಂದೇಶವನ್ನು ಹಂಚಿಕೊಂಡಿದ್ದರು. ಈ ವಿಡಿಯೋ ಅಭಿಮಾನಿಗಳ ಮನಸ್ಸಿಗೆ ದೊಡ್ಡ ಸ್ಪಂದನೆಯನ್ನು ನೀಡಿದೆ. ಕನ್ನಡ ಚಿತ್ರರಂಗದ ಹೊರತಾಗಿ, ರಿಷಬ್ ಶೆಟ್ಟಿ ಈಗ ತೆಲುಗು ಸಿನಿಮಾಗಳತ್ತವೂ ಗಮನ ಹರಿಸುತ್ತಿದ್ದಾರೆ. ಪ್ರಶಾಂತ್ ವರ್ಮಾ ಅವರ ‘ಜೈ ಹನುಮಾನ್’ ಚಿತ್ರದಲ್ಲಿ ಹನುಮಾನ್ ಪಾತ್ರ ನಿರ್ವಹಿಸುತ್ತಿದ್ದಾರೆ. ಜೊತೆಗೆ ಛತ್ರಪತಿ ಶಿವಾಜಿ ಕುರಿತ ಚಿತ್ರದಲ್ಲಿಯೂ ನಟಿಸಲಿದ್ದಾರೆ.

ಸ್ವಾತಂತ್ರ್ಯೋತ್ಸವವನ್ನು ತಮ್ಮ ಹುಟ್ಟೂರಿನಲ್ಲಿ ಆಚರಿಸಿರುವ ರಿಷಬ್ ಶೆಟ್ಟಿ, ತಮ್ಮ ನಾಡಿನ ಮಣ್ಣಿಗೆ ಸಲ್ಲಿಸಿದ ಗೌರವದಿಂದ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.