Back to Top

“ಮಕ್ಕಳು ದೇವರ ನಿರ್ಧಾರ” – ಪ್ರೆಗ್ನೆನ್ಸಿ ಪ್ರಶ್ನೆಗೆ ಸ್ಪಷ್ಟನೆ ನೀಡಿದ ನಟಿ ಶುಭಾ ಪೂಂಜಾ

SSTV Profile Logo SStv August 21, 2025
ಪ್ರೆಗ್ನೆನ್ಸಿ ಪ್ರಶ್ನೆಗೆ ಸ್ಪಷ್ಟನೆ ನೀಡಿದ ನಟಿ ಶುಭಾ ಪೂಂಜಾ
ಪ್ರೆಗ್ನೆನ್ಸಿ ಪ್ರಶ್ನೆಗೆ ಸ್ಪಷ್ಟನೆ ನೀಡಿದ ನಟಿ ಶುಭಾ ಪೂಂಜಾ

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ ಶುಭಾ ಪೂಂಜಾ ಅವರು ತಮ್ಮ ಖಾಸಗಿ ಜೀವನ ಹಾಗೂ ಭವಿಷ್ಯದ ಬಗ್ಗೆ ಮಾಡಿದ ಹೇಳಿಕೆಗಳು ಇದೀಗ ಸುದ್ದಿಯಲ್ಲಿವೆ. 2022ರ ಜನವರಿ 5ರಂದು ತಮ್ಮ ಬಹುಕಾಲದ ಗೆಳೆಯ ಸುಮಂತ್ ಮಹಾಬಲ ಅವರನ್ನು ವಿವಾಹವಾದ ಶುಭಾ ಪೂಂಜಾ, ಈಗ ಮದುವೆಯಾಗಿ ಮೂರು ವರ್ಷಗಳನ್ನು ಪೂರೈಸಿದ್ದಾರೆ. ಅಭಿಮಾನಿಗಳು ಹಾಗೂ ಪತ್ರಕರ್ತರು ಕೇಳುವ ಸಾಮಾನ್ಯ ಪ್ರಶ್ನೆ ಎಂದರೆ – “ಗುಡ್ ನ್ಯೂಸ್ ಯಾವಾಗ?” ಎಂಬುದು. ಇದಕ್ಕೆ ನಟಿ ನೀಡಿದ ಉತ್ತರವೇ ಎಲ್ಲರ ಗಮನ ಸೆಳೆದಿದೆ.

“ಅದು ದೇವರ ನಿರ್ಧಾರ. ನನಗೆ ಮಕ್ಕಳಿದ್ದಾರೆ, ಬೀದಿಯಲ್ಲಿ ಇರುವ ಎಲ್ಲಾ ಪ್ರಾಣಿಗಳು ನನ್ನ ಮಕ್ಕಳೇ. ನನಗೆ ಸ್ವಂತ ಮಕ್ಕಳಾದರೂ, ಆ ಮಕ್ಕಳನ್ನು ನಾನು ನನ್ನ ನಾಯಿ ಮತ್ತು ಬೆಕ್ಕುಗಳಷ್ಟು ಪ್ರೀತಿ ಮಾಡಲ್ಲ. ನಾನು ಯಾವಾಗಲೂ ಇದನ್ನು ಹೇಳುತ್ತಿರುತ್ತೇನೆ. ಅವರು ನನ್ನ ಮಕ್ಕಳು. ಆದರೆ ಬೇರೆಯದ್ದು ಯಾವಾಗ ಆಗಬೇಕೋ ಆಗ ಆಗುತ್ತದೆ” ಎಂದು ಹೇಳಿಕೊಂಡಿದ್ದಾರೆ. ಅವರ ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ.

ಶುಭಾ ಪೂಂಜಾ ಅವರು ತಮ್ಮ ತಾಯಿ ನಿಧನದ ನಂತರ ಭಾರೀ ದುಃಖವನ್ನು ಅನುಭವಿಸಿದ್ದಾರೆ. “ಅಮ್ಮನ ತೀರಿಕೊಂಡ ನಂತರ ನಾನು ತುಂಬಾ ಡಿಸ್ಟರ್ಬ್ ಆಗಿದ್ದೆ. ಸುಮಾರು 3-4 ತಿಂಗಳು ನನಗೆ ಎಫೆಕ್ಟ್ ಆಯ್ತು. ಆದರೆ ನಾನು ಕಂಬ್ಯಾಕ್ ಆಗಲೇ ಬೇಕಿತ್ತು. ಹಾಗಾಗಿ ಫಿಟ್ನೆಸ್ ಕಡೆ ಹೆಚ್ಚು ಗಮನ ಹರಿಸಿದೆ. ಈಗ ನಾನು ಸ್ಟ್ರಾಂಗ್ ಆಗಿ ಕಂಬ್ಯಾಕ್ ಆಗುತ್ತಿದ್ದೇನೆ” ಎಂದು ಹೇಳಿದ್ದಾರೆ.

ಅವರು ಪ್ರಸ್ತುತ ಫಿಟ್ನೆಸ್, ಈವೆಂಟ್ಸ್ ಹಾಗೂ ಸಿನಿಮಾಗಳ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಹೊಸ ಪ್ರಾಜೆಕ್ಟ್‌ಗಳ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿರುವ ಶುಭಾ ಪೂಂಜಾ ಆಗಾಗ ತಮ್ಮ ವೈಯಕ್ತಿಕ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ವಿಶೇಷವಾಗಿ, ತಾಯಿ ನಿಧನದ ವೇಳೆ ಅವರು ಮಾಡಿದ ಭಾವುಕ ಪೋಸ್ಟ್ ಹಲವರ ಕಣ್ಣೀರಾಗಿಸಿತ್ತು.

ಶುಭಾ ಪೂಂಜಾ ಹಲವು ಸಿನಿಮಾಗಳಲ್ಲಿ ಅಭಿನಯಿಸಿದರೂ, ವಿಶೇಷವಾಗಿ ‘ಬಿಗ್ ಬಾಸ್ ಕನ್ನಡ ಸೀಸನ್ 8’ ಮೂಲಕ ಕಿರುತೆರೆ ಆಡಿಯನ್ಸ್‌ಗೂ ಹತ್ತಿರವಾದರು. ಈಗಲೂ ತಮ್ಮ ಚಟುವಟಿಕೆಗಳ ಮೂಲಕ ಅಭಿಮಾನಿಗಳ ಹೃದಯದಲ್ಲಿ ನೆಲೆಸಿರುವ ಅವರು, ಮುಂದಿನ ದಿನಗಳಲ್ಲಿ ಮತ್ತಷ್ಟು ಶಕ್ತಿಯುತವಾಗಿ ಚಿತ್ರರಂಗಕ್ಕೆ ಮರಳುವ ನಿರೀಕ್ಷೆ ವ್ಯಕ್ತವಾಗಿದೆ.