Back to Top

‘ಇದ್ರೇ ನೆಮ್ದಿಯಾಗ್ ಇರ್ಬೇಕ್’ ಅಂದ ಡಿಬಾಸ್ ದರ್ಶನ್ ; ‘ದಿ ಡೆವಿಲ್’ ಸಿನಿಮಾ ಹಾಡಿಗೆ ಮೊದಲು ಜೈಲು?

SSTV Profile Logo SStv August 14, 2025
‘ಇದ್ರೇ ನೆಮ್ದಿಯಾಗ್ ಇರ್ಬೇಕ್’ ಅಂದ ಡಿಬಾಸ್ ದರ್ಶನ್ ಮತ್ತೆ ಜೈಲು
‘ಇದ್ರೇ ನೆಮ್ದಿಯಾಗ್ ಇರ್ಬೇಕ್’ ಅಂದ ಡಿಬಾಸ್ ದರ್ಶನ್ ಮತ್ತೆ ಜೈಲು

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಅಭಿಮಾನಿಗಳಿಗೆ ಇಂದು ಅಪ್ರತೀಕ್ಷಿತ ಆಘಾತ ತಟ್ಟಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ದರ್ಶನ್‌ ಜಾಮೀನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ. ಹೈಕೋರ್ಟ್‌ ನೀಡಿದ್ದ ಜಾಮೀನು ತೀರ್ಪನ್ನು ರಾಜ್ಯ ಸರ್ಕಾರ ಪ್ರಶ್ನಿಸಿದ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್‌ ದರ್ಶನ್‌ ಸೇರಿದಂತೆ 7 ಆರೋಪಿಗಳ ಬೇಲ್ ರದ್ದು ಮಾಡಿ ನಾಲ್ಕು ವಾರಗಳೊಳಗೆ ಕಸ್ಟಡಿಗೆ ಪಡೆಯಲು ಆದೇಶಿಸಿದೆ.

ಆಗಸ್ಟ್ 15 ರಂದು ಬೆಳಗ್ಗೆ 10.05ಕ್ಕೆ ‘ಸರಿಗಮ ಕನ್ನಡ’ ಯೂಟ್ಯೂಬ್‌ ಚಾನೆಲ್‌ನಲ್ಲಿ ದರ್ಶನ್ ಅಭಿನಯದ ದಿ ಡೆವಿಲ್ ಸಿನಿಮಾದ “ಇದ್ರೇ ನೆಮ್ದಿಯಾಗ್ ಇರ್ಬೇಕ್” ಹಾಡು ಬಿಡುಗಡೆಯಾಗಬೇಕಿದೆ. ಅಭಿಮಾನಿಗಳು ಈ ಹಾಡಿಗಾಗಿ ಉತ್ಸಾಹದಿಂದ ಕಾಯುತ್ತಿದ್ದರು. ಆದರೆ, ಸುಪ್ರೀಂ ಕೋರ್ಟ್‌ ತೀರ್ಪಿನ ನಂತರ, ಹಾಡು ಬಿಡುಗಡೆಯಾಗುವ ಮುನ್ನವೇ ದರ್ಶನ್‌ ಮತ್ತೆ ಜೈಲಿಗೆ ಹೋಗುವ ಸಾಧ್ಯತೆ ಹೆಚ್ಚಿದೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ದರ್ಶನ್‌ ಹಾಗೂ ಪವಿತ್ರಾ ಗೌಡ ಸೇರಿ ಒಟ್ಟು 7 ಆರೋಪಿಗಳಿಗೆ ಹೈಕೋರ್ಟ್‌ ಜಾಮೀನು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು. ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಹೈಕೋರ್ಟ್ ತೀರ್ಪಿನ ಮೇಲೆ ಅಸಮಾಧಾನ ವ್ಯಕ್ತಪಡಿಸಿತು. ಇಂದು ತೀರ್ಪು ಪ್ರಕಟಿಸಿ, ಆರೋಪಿಗಳ ಬೇಲ್ ರದ್ದುಪಡಿಸಿ, ಅವರನ್ನು ಕಸ್ಟಡಿಗೆ ಪಡೆಯಲು ಸ್ಪಷ್ಟ ಆದೇಶ ನೀಡಿದೆ.

ತೀರ್ಪು ಹೊರಬಂದ ತಕ್ಷಣವೇ, ದರ್ಶನ್‌, ಪವಿತ್ರಾ ಗೌಡ ಮತ್ತು ಇತರೆ ಆರೋಪಿಗಳನ್ನು ಬಂಧಿಸಲು ಕರ್ನಾಟಕ ಪೊಲೀಸರು ಸಜ್ಜಾಗಿದ್ದಾರೆ. ಕೆಲವು ವರದಿಗಳ ಪ್ರಕಾರ, ಇಂದೇ ಬಂಧನ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ.

ಪ್ರಕಾಶ್ ವೀರ್ ನಿರ್ದೇಶನದ ದಿ ಡೆವಿಲ್ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಡಬ್ಬಿಂಗ್ ಕೂಡ ಪೂರ್ಣಗೊಂಡಿದ್ದು, ಪೋಸ್ಟ್-ಪ್ರೊಡಕ್ಷನ್‌ ಕಾರ್ಯಗಳು ಅಂತಿಮ ಹಂತದಲ್ಲಿವೆ. ಚಿತ್ರದಲ್ಲಿ ದರ್ಶನ್‌ ನಾಯಕನಾಗಿ, ರಚನಾ ರೈ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ತುಳಸಿ, ಅಚ್ಯುತ ಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸ ಪ್ರಭು, ಶೋಭ್ ರಾಜ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.