ದರ್ಶನ್ ಬಂಧನ ಬೆನ್ನಲ್ಲೇ ರಮ್ಯಾ ಇನ್‌ಸ್ಟಾಗ್ರಾಂ ಪೋಸ್ಟ್ – "ಕಾನೂನಿನ ಮುಂದೆ ಎಲ್ಲರೂ ಸಮಾನರು"


ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ನಂತರ, ನಟಿ ಹಾಗೂ ಮಾಜಿ ಸಂಸದ ರಮ್ಯಾ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅವರು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಬಲವಾದ ಸಂದೇಶವನ್ನು ಸುಪ್ರೀಂ ತೀರ್ಪು ನೀಡಿದೆ ಎಂದು ಹೇಳಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡ ರಮ್ಯಾ, “ನ್ಯಾಯಯುತವಾಗಿ ಪ್ರಕ್ರಿಯೆಯನ್ನು ಅನುಸರಿಸಿ. ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಳ್ಳಿ. ಇದು ದೀರ್ಘ ಮತ್ತು ಕಠಿಣ ಪ್ರಯಾಣವಾದರೂ, ಸುರಂಗದ ಕೊನೆಯಲ್ಲಿ ಬೆಳಕು ಇರುವುದರಲ್ಲಿ ನಂಬಿಕೆ ಇರಲಿ. ಕಾನೂನನ್ನು ನಿಮ್ಮ ಕೈಗೆ ತೆಗೆದುಕೊಳ್ಳಬೇಡಿ, ನ್ಯಾಯ ಸಿಗುತ್ತದೆ. ನಿಮ್ಮ ಪ್ರಜ್ಞೆಗೆ ನಿಷ್ಠರಾಗಿರಿ” ಎಂದು ಬರೆದಿದ್ದಾರೆ.
ರಮ್ಯಾ ಇತ್ತೀಚೆಗೆ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದರು. ಆದರೆ, ಈ ಹೇಳಿಕೆಗಳ ನಂತರ ದರ್ಶನ್ ಅಭಿಮಾನಿಗಳಿಂದ ಅವರಿಗೆ ಅಶ್ಲೀಲ ಸಂದೇಶಗಳು ಬಂದಿದ್ದವು. ಇದರ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ಕೆಲವರನ್ನು ಬಂಧಿಸಲಾಗಿತ್ತು.
ಇನ್ನು ದರ್ಶನ್ ಜಾಮೀನು ರದ್ದುಗೊಂಡ ಬೆನ್ನಲ್ಲೇ, ಅವರು ಮತ್ತೆ ಜೈಲಿಗೆ ಸೇರುವ ಸಾಧ್ಯತೆ ಹೆಚ್ಚಾಗಿದೆ. ಸುಪ್ರೀಂ ಕೋರ್ಟ್ ಆದೇಶದ ನಂತರ, ದರ್ಶನ್ ಮತ್ತು ಇತರ ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಸೂಚನೆ ನೀಡಲಾಗಿದೆ. ರಮ್ಯಾ ಈ ಬೆಳವಣಿಗೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದು, ನ್ಯಾಯ ವ್ಯವಸ್ಥೆಯ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.