‘ಕೂಲಿ’ ಫಸ್ಟ್ ಹಾಫ್ ಮಿಂಚು, ಸೆಕೆಂಡ್ ಹಾಫ್ ಮಂಕು – ಟ್ವಿಟರ್‌ನಲ್ಲಿ ಮಿಶ್ರ ಪ್ರತಿಕ್ರಿಯೆ!


ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಕೂಲಿ ಸಿನಿಮಾ ಭಾರೀ ಹೈಪ್ ನಡುವೆ ಬಿಡುಗಡೆಯಾಗಿದೆ. ದೇಶದ ಹಲವೆಡೆ ಬೆಳಗ್ಗೆ 6 ಗಂಟೆಗೆ ಶೋ ಆರಂಭಗೊಂಡು, ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಥಿಯೇಟರ್‌ಗಳಿಗೆ ಹರಿದು ಬಂದರು. ಆದರೆ, ಚಿತ್ರ ಬಿಡುಗಡೆಯಾದ ತಕ್ಷಣ ಟ್ವಿಟರ್‌ನಲ್ಲಿ ಬಂದ ಪ್ರತಿಕ್ರಿಯೆಗಳು ಮಿಶ್ರ ಸ್ವರೂಪದಲ್ಲಿವೆ.
ಟ್ವಿಟರ್‌ನಲ್ಲಿ ಅನೇಕರು ಫಸ್ಟ್ ಹಾಫ್‌ನಲ್ಲಿ ಸಿನಿಮಾ ಚೆನ್ನಾಗಿ ಎಂಟರ್ಟೈನ್ ಮಾಡಿದೆ ಎಂದು ಹೇಳಿದ್ದಾರೆ. ಪೇಸ್, ಮ್ಯಾಸಿ ಸೀನ್ಸ್ ಹಾಗೂ ಕೆಲವು ಸಂಭಾಷಣೆಗಳು ಪ್ರೇಕ್ಷಕರ ಮೆಚ್ಚುಗೆ ಪಡೆದಿವೆ. ಆದರೆ, ಸೆಕೆಂಡ್ ಹಾಫ್‌ನಲ್ಲಿ ಕಥೆ ಡಲ್ ಆಗುತ್ತದೆ, ಕ್ಲೈಮ್ಯಾಕ್ಸ್ ಮೊದಲೇ ಊಹಿಸಬಹುದಾಗಿದೆ ಎಂದು ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಿತ್ರದ ಮಧ್ಯದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಪ್ರವೇಶದಿಂದ ಸಿನಿಮಾ ಮತ್ತೊಮ್ಮೆ ಎನರ್ಜಿ ಪಡೆದುಕೊಂಡಿದೆ ಎಂದು ಕೆಲವು ನೆಟ್ಟಿಗರು ಹೇಳಿದ್ದಾರೆ. ಉಪೇಂದ್ರ ಅವರ ಸ್ಟೈಲ್ ಮತ್ತು ಡೈಲಾಗ್ ಡೆಲಿವರಿ ಫ್ಯಾನ್ಸ್‌ನ್ನು ರಂಜಿಸಿದೆ. ಅಭಿಮಾನಿಗಳು ಮತ್ತು ಸಿನಿಪ್ರೇಮಿಗಳು ನಿರೀಕ್ಷಿಸಿದ್ದಂತಹ ಮ್ಯಾಜಿಕ್ ರಜನಿಕಾಂತ್ ಅಥವಾ ನಿರ್ದೇಶಕ ಲೋಕೇಶ್ ಕನಕರಾಜ್ ಅವರಿಂದ ಆಗಿಲ್ಲ ಎಂದು ಕೆಲವರು ನಿರಾಶೆ ವ್ಯಕ್ತಪಡಿಸಿದ್ದಾರೆ. “ಕೂಲಿ ಕೆಟ್ಟ ಸಿನಿಮಾ ಅಲ್ಲ, ಆದರೆ ನಿರೀಕ್ಷಿತ ಮಟ್ಟಕ್ಕೇರುವುದಿಲ್ಲ” ಎಂಬ ಅಭಿಪ್ರಾಯ ಹೆಚ್ಚು ಕೇಳಿಬಂದಿದೆ.
ನಾಗಾರ್ಜುನ್ ಅವರ ಅಭಿನಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಅವರ ಪಾತ್ರದ ಕಥಾನಕ ಮತ್ತು ಕ್ಲೈಮ್ಯಾಕ್ಸ್‌ನಲ್ಲಿ ಹೊಸತನ ಕೊರತೆಯಿದೆ ಎಂದು ಅಭಿಪ್ರಾಯಿಸಲಾಗಿದೆ. ಟ್ವಿಟರ್ ರಿವ್ಯೂ ಪ್ರಕಾರ, ಕೂಲಿ ಸಿನಿಮಾ ರಜನಿಕಾಂತ್ ಅಭಿಮಾನಿಗಳಿಗೆ ತಮ್ಮದೇ ರೀತಿಯಲ್ಲಿ ಎಂಜಾಯ್ ಮಾಡುವಂಥದ್ದು. ಆದರೆ, ಸಾಮಾನ್ಯ ಪ್ರೇಕ್ಷಕರಿಗೆ ಇದು ಮಿಶ್ರ ಅನುಭವ ನೀಡಿದೆ. ಹೆಚ್ಚಿನ ನಿರೀಕ್ಷೆಯಿಂದ ಹೋದವರಿಗೆ ಸ್ವಲ್ಪ ನಿರಾಸೆ ಉಂಟಾಗಿದೆ ಎನ್ನಬಹುದು.