ʻಬಿಗ್ ಬಾಸ್ʼ ಶಿಶಿರ್ ಮದುವೆ ಯಾವಾಗ? ತಂದೆ ಕೊಟ್ಟ ಸ್ಪಷ್ಟ ಉತ್ತರ!


ʻಬಿಗ್ ಬಾಸ್ ಕನ್ನಡʼ ಸೀಸನ್ 11ರಲ್ಲಿ ಸ್ಪರ್ಧಿಯಾಗಿ ಗುರುತಿಸಿಕೊಂಡ ಶಿಶಿರ್ ಶಾಸ್ತ್ರಿ, ಶೋ ಬಳಿಕವೂ ಸುದ್ದಿಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ವಿಶೇಷವಾಗಿ, ಸೋಶಿಯಲ್ ಮೀಡಿಯಾದಲ್ಲಿ ಅವರ ಮದುವೆ ಕುರಿತ ಗಾಸಿಪ್‌ಗಳು ಸಖತ್ ವೈರಲ್ ಆಗುತ್ತಿವೆ. ʻಬಿಗ್ ಬಾಸ್ʼ ಮನೆಯಲ್ಲಿ ಐಶ್ವರ್ಯಾ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರಿ ನಡುವಿನ ಲವ್ ಟ್ರ್ಯಾಕ್ ದೊಡ್ಡ ಚರ್ಚೆಯಾಗಿ ಬದಲಾದ್ದರಿಂದ, ಇವರು ರಿಯಲ್ ಲೈಫ್‌ನಲ್ಲಿಯೂ ಜೋಡಿಯಾಗುತ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ.
ಈ ನಡುವೆ, ಶಿಶಿರ್ ಶಾಸ್ತ್ರಿ ಅವರ ತಂದೆ ಸುಗ್ಗನಹಳ್ಳಿ ಷಡಕ್ಷರಿಯವರು ಈ ವಿಷಯಕ್ಕೆ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗೆ ʻನ್ಯೂಸೋ ನ್ಯೂಸುʼ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ಮಗನ ಜೀವನ ನಿರ್ಧಾರಗಳಲ್ಲಿ ನಾವು ಯಾವತ್ತೂ ತಡೆ ಹಾಕಿಲ್ಲ. ಶಿಶಿರ್ ಈಗ ಪ್ರೊಡಕ್ಷನ್ ಹೌಸ್ ಆರಂಭಿಸಿದ್ದಾನೆ. ಅವನ ಗುರಿ ಬೇರೆ ಇದೆ. ಯಾವಾಗ ಮದುವೆ ಮಾಡಿಕೊಳ್ಳಬೇಕು ಅನ್ನೋದನ್ನು ಅವನಿಗೇ ಗೊತ್ತು. ಅವನು ಯಾವ ಹುಡುಗಿಯನ್ನು ಆಯ್ಕೆ ಮಾಡಿದರೂ, ನಾವು ಯಾವಾಗಲೂ ಸಮ್ಮತಿಸುತ್ತೇವೆ” ಎಂದು ಹೇಳಿದ್ದಾರೆ.
ಮಗನ ಮದುವೆ ಕುರಿತ ಗಾಸಿಪ್‌ಗಳ ಬಗ್ಗೆ ಮಾತನಾಡಿದ ಷಡಕ್ಷರಿಯವರು, “ಇವನ ಕರಿಯರ್ ಫೀಲ್ಡ್ ನನಗೆ ಹೊಸದೇನೂ ಅಲ್ಲ. ನಾನು ಸಹ ಹಿಂದೆ ಏಳು–ಎಂಟು ಸೀರಿಯಲ್‌ಗಳು, ಒಂದು ಸಿನಿಮಾ ಮಾಡಿದ್ದೇನೆ. ಈಗಿನ ನಟರು, ನಿರ್ದೇಶಕರ ಪರಿಸ್ಥಿತಿಯನ್ನು ನಾನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ಈ ರೀತಿಯ ಟ್ರೆಂಡ್‌ಗಳು ಬರುತ್ತವೆ, ಹೋಗುತ್ತವೆ. ಅದನ್ನು ನಾನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ಶಿಶಿರ್ ಶಾಸ್ತ್ರಿಯವರೂ ತಮ್ಮ ಅಭಿಪ್ರಾಯ ಹಂಚಿಕೊಂಡು, “ಸೋಶಿಯಲ್ ಮೀಡಿಯಾದಲ್ಲಿ ನನ್ನ ಜೊತೆ ಕಾಣುವ ಎಲ್ಲರೂ ನಮ್ಮ ಮನೆಗೆ ಬಂದು ಹೋಗಿರುವವರು. ಅಪ್ಪನಿಗೂ ಅವರ ಪರಿಚಯವಿದೆ, ಹಾಗಾಗಿ ಸಮಸ್ಯೆಯೇ ಇಲ್ಲ” ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ, ಶಿಶಿರ್ ಶಾಸ್ತ್ರಿ ಮದುವೆ ಕುರಿತ ವದಂತಿಗಳಿಗೆ ಕುಟುಂಬವೇ ಕ್ಲಾರಿಟಿ ನೀಡಿದ್ದು, ಇನ್ನು ಮುಂದೆ ಈ ವಿಷಯ ಗಾಸಿಪ್‌ಗಿಂತ ನಿಜವಾದ ಘೋಷಣೆಗೆ ಕಾಯಬೇಕಾಗಿದೆ.