"ದೇವರ ಮೇಲೆ ನಂಬಿಕೆ ಇಡಬೇಕು" – ಪೋಸ್ಟ್ ಮಾಡಿದ ಕೆಲವೇ ಹೊತ್ತಿನಲ್ಲಿ ಪವಿತ್ರಾ ಗೌಡ ಬಂಧನ!


ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲಿನ ದಾರಿ ಹಿಡಿಯುವ ಪರಿಸ್ಥಿತಿ ಎದುರಿಸುತ್ತಿದ್ದರೂ, ಪವಿತ್ರಾ ಗೌಡ ತಮ್ಮ ಭಾವನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಪವಿತ್ರಾ ಗೌಡ ಇನ್‌ಸ್ಟಾಗ್ರಾಂ ಸ್ಟೋರಿ, ಬಂಧನಕ್ಕೆ ಕೆಲವೇ ಕ್ಷಣಗಳ ಮುನ್ನ, ಪವಿತ್ರಾ ಗೌಡ ಇನ್‌ಸ್ಟಾಗ್ರಾಂನಲ್ಲಿ ಹೀಗೆ ಬರೆದಿದ್ದಾರೆ: “ದೇವರ ಮೇಲೆ ನಂಬಿಕೆ ಇಡಬೇಕು. ಬಹುಶಃ ಅವರ ಉತ್ತರ ‘ಕಾಯಿರಿ’ ಅನ್ನೋದಾಗಿರಬಹುದು. ಕೆಲವು ವಿಳಂಬಗಳು ದೈವಿಕ ರಕ್ಷಣೆಯಾಗಿರುತ್ತದೆ. ನಾನು ತಾಳ್ಮೆ ಮತ್ತು ನಂಬಿಕೆಯನ್ನು ಆರಿಸಿಕೊಳ್ಳುತ್ತೇನೆ.”
ಇದಕ್ಕೂ ಮೊದಲು, ಸುಪ್ರೀಂ ಕೋರ್ಟ್ ತೀರ್ಪು ಹೊರಬರುವ ಮುನ್ನ ಅವರು ಮತ್ತೊಂದು ಸಂದೇಶ ಹಂಚಿಕೊಂಡಿದ್ದರು: “ಸತ್ಯವು ಎಲ್ಲಕ್ಕಿಂತ ಹೆಚ್ಚು ಶಕ್ತಿಶಾಲಿ. ಅದು ಯಾವಾಗಲೂ ನ್ಯಾಯವನ್ನು ಕೊಡುತ್ತದೆ. ಎಷ್ಟೇ ಸಮಯ ತೆಗೆದುಕೊಂಡರೂ, ನ್ಯಾಯವು ತನ್ನ ದಾರಿಯನ್ನು ಕಂಡುಕೊಳ್ಳುತ್ತದೆ.”
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳ ಜಾಮೀನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ತೀರ್ಪಿನಲ್ಲಿ, ಆರೋಪಿಗಳು ಕೂಡಲೇ ಶರಣಾಗಬೇಕೆಂದು ಸ್ಪಷ್ಟ ಸೂಚನೆ ನೀಡಿದೆ. ತೀರ್ಪು ಹೊರಬರುವ ಮುನ್ನವೇ, ಪವಿತ್ರಾ ಗೌಡ ಮನೆಯಲ್ಲಿ ತುಳಸಿ ಗಿಡಕ್ಕೆ ಪೂಜೆ ಸಲ್ಲಿಸಿದ್ದರು. ತೀರ್ಪು ಬಂದ ಕೂಡಲೆ, ಅವರು ತಾಯಿ ಎದುರು ಬಿಕ್ಕಳಿಸಿ ಅತ್ತರು. ಈ ವೇಳೆ ಮನೆ ಹೊರಗೆ ಪೊಲೀಸರು ಕಾಯುತ್ತಿದ್ದರು. ಬಾಗಿಲು ತೆರೆದ ಕ್ಷಣವೇ, ಪವಿತ್ರಾ ಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ಬಂಧನದ ನಂತರ, ಪವಿತ್ರಾ ಗೌಡ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಬಳಿಕ ಕೋರ್ಟ್ ಮುಂದೆ ಹಾಜರುಪಡಿಸಲಾಗುವುದು. ಉಳಿದ ಆರೋಪಿಗಳ ಬಂಧನಕ್ಕೂ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ.