‘ರಾಕಿ ಭಾಯ್’ ಯಶ್ ತಾಯಿ ಈಗ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ದೊಡ್ಡ ಹೆಜ್ಜೆ!


‘ರಾಕಿಂಗ್ ಸ್ಟಾರ್’ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್, ‘ಕೊತ್ತಲವಾಡಿ’ ಚಿತ್ರದ ಮೂಲಕ ನಿರ್ಮಾಪಕಿಯಾಗಿ ಸ್ಯಾಂಡಲ್ವುಡ್ನಲ್ಲಿ ಎಲ್ಲರ ಗಮನ ಸೆಳೆದಿದ್ದರು. ಪೃಥ್ವಿ ಅಂಬಾರ್ ಅಭಿನಯದ ಆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು.
ಈಗ ಪುಷ್ಪಾ ಅರುಣ್ ಕುಮಾರ್ ಪ್ಯಾನ್ ಇಂಡಿಯಾ ಸಿನಿಮಾದತ್ತ ಗಮನಹರಿಸಿದ್ದು, ಸೆಪ್ಟೆಂಬರ್ 5 ರಂದು ಬಿಡುಗಡೆಯಾಗಲಿರುವ ಅನುಷ್ಕಾ ಶೆಟ್ಟಿ ನಾಯಕಿಯಾಗಿ ನಟಿಸಿರುವ ‘ಘಾಟಿ’ ಚಿತ್ರದ ಕರ್ನಾಟಕ ವಿತರಣೆ ಹಕ್ಕುಗಳನ್ನು ಪಡೆಯಲು ಮುಂದಾಗಿದ್ದಾರೆ.
ಈ ಸಿನಿಮಾವನ್ನು ಕ್ರಿಷ್ ಜಗರ್ಲಮುಡಿ ನಿರ್ದೇಶಿಸಿದ್ದು, ಅನುಷ್ಕಾ ಶೆಟ್ಟಿ ಅವರ ವೃತ್ತಿ ಜೀವನದ ಮತ್ತೊಂದು ಮೈಲಿಗಲ್ಲೆಯಾಗಲಿದೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಚಿತ್ರದಲ್ಲಿ ವಿಕ್ರಮ್ ಪ್ರಭು, ಜಗಪತಿ ಬಾಬು, ಚೈತನ್ಯ ರಾವ್ ಮದಡಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.
‘ಕೊತ್ತಲವಾಡಿ’ಗಾಗಿ ಪಿಎ ಪ್ರೊಡಕ್ಷನ್ಸ್ ಸ್ಥಾಪಿಸಿದ್ದ ಪುಷ್ಪಾ, ಇದೀಗ ‘ಘಾಟಿ’ ವಿತರಣೆಗೆ ಪಿಎ ಫಿಲ್ಮ್ಸ್ ಆರಂಭಿಸಿದ್ದಾರೆ. ಯಶ್ ತಾಯಿ ಪ್ಯಾನ್ ಇಂಡಿಯಾ ಸಿನಿಮಾಗಳ ಕಡೆ ಹೆಜ್ಜೆ ಇಟ್ಟಿರುವುದು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸುದ್ದಿಯಾಗಿದೆ.