Back to Top

“ನಮ್ಮ ಬದುಕನ್ನ ಪುನರ್‌ ನಿರ್ಮಿಸಿಕೊಳ್ಳುತ್ತೇವೆ” – ಪತಿಯ ವಿರುದ್ಧ ದೂರು ಬಳಿಕ ಸಪ್ನಾ ಮೊದಲ ಪ್ರತಿಕ್ರಿಯೆ

SSTV Profile Logo SStv August 18, 2025
ಅಜಯ್ ರಾವ್ ವಿರುದ್ಧ ದೂರಿನ ಬಳಿಕ ಪತ್ನಿ ಸಪ್ನಾ ಮೊದಲ ಪ್ರತಿಕ್ರಿಯೆ
ಅಜಯ್ ರಾವ್ ವಿರುದ್ಧ ದೂರಿನ ಬಳಿಕ ಪತ್ನಿ ಸಪ್ನಾ ಮೊದಲ ಪ್ರತಿಕ್ರಿಯೆ

ಕನ್ನಡ ಚಿತ್ರರಂಗದ ಜನಪ್ರಿಯ ನಟ ಅಜಯ್ ರಾವ್ ವಿರುದ್ಧ ಪತ್ನಿ ಸಪ್ನಾ ಅವರು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ ಬಳಿಕ, ಇದೇ ಮೊದಲ ಬಾರಿಗೆ ಸಪ್ನಾ ಅವರು ತಮ್ಮ ಪ್ರತಿಕ್ರಿಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಪ್ನಾ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. ಅವರು ಬರೆದಿದ್ದು – “ತಾಯಿಯಾಗಿ ನನ್ನ ಮೊದಲ ಜವಾಬ್ದಾರಿ ನನ್ನ ಮಗಳ ಸುರಕ್ಷತೆ, ಗೌರವ ಮತ್ತು ಅವಳ ಭವಿಷ್ಯಕ್ಕಾಗಿ. ಪ್ರತಿದಿನ ಧೈರ್ಯವನ್ನು ಕುಡಿಸಿಕೊಂಡು, ಸವಾಲುಗಳನ್ನು ಎದುರಿಸುತ್ತಿದ್ದೇನೆ. ನಾನು ಮತ್ತು ನನ್ನ ಮಗಳು ನಮ್ಮ ಬದುಕನ್ನ ಪುನರ್ ನಿರ್ಮಿಸಿಕೊಳ್ಳಲು, ನಮ್ಮ ದಾಂಪತ್ಯ ಜೀವನವನ್ನ ಪುನಃ ಕಟ್ಟಿಕೊಳ್ಳಲು ನಿಮ್ಮ ಪ್ರಾರ್ಥನೆಗಳನ್ನು ಕೇಳಿಕೊಳ್ಳುತ್ತೇನೆ. ಈ ವಿಷಯ ನಮ್ಮ ವೈಯಕ್ತಿಕ ಮತ್ತು ದಾಂಪತ್ಯ ಜೀವನಕ್ಕೆ ಮಾತ್ರ ಸಂಬಂಧಿಸಿದ್ದು, ಹೊರಗಿನವರಿಂದ ಯಾವುದೇ ರೀತಿಯ ಹಸ್ತಕ್ಷೇಪ ಬೇಡ” ಎಂದು ತಿಳಿಸಿದರು.

ಪೋಸ್ಟ್‌ನ ಕೊನೆಯಲ್ಲಿ ಅವರು ತಮ್ಮ ಹೆಸರನ್ನು ‘ಸಪ್ನಾ ಅಜಯ್ ರಾವ್’ ಎಂದು ಉಲ್ಲೇಖಿಸಿದ್ದು, ವಿಚ್ಛೇದನದ ಉದ್ದೇಶ ತಮ್ಮಲ್ಲಿಲ್ಲ ಎಂಬುದನ್ನು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ. ಇದೇ ವಿಷಯದ ಬಗ್ಗೆ ನಟ ಅಜಯ್ ರಾವ್ ಕೂಡ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಅವರು, “ಈ ಸೂಕ್ಷ್ಮ ಸಮಯದಲ್ಲಿ ನಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸಿ. ವೈಯಕ್ತಿಕ ವಿಷಯಗಳಿಗೆ ಸಂಬಂಧಿಸಿದ ಯಾವುದೇ ಸುದ್ದಿಯನ್ನು ಹಂಚಿಕೊಳ್ಳುವುದು ಅಥವಾ ಹರಡುವುದನ್ನು ದೂರವಿಡಿ. ಪ್ರತಿಯೊಂದು ಕುಟುಂಬಕ್ಕೂ ಸವಾಲುಗಳು ಇರುತ್ತವೆ. ದಯವಿಟ್ಟು ಅದನ್ನು ಖಾಸಗಿಯಾಗಿ ಉಳಿಯಲು ಸಹಕರಿಸಿ” ಎಂದು ಮನವಿ ಮಾಡಿದ್ದಾರೆ.

ಅಜಯ್ ರಾವ್ ಮತ್ತು ಸಪ್ನಾ ಅವರು 2014ರ ಡಿಸೆಂಬರ್‌ನಲ್ಲಿ ವಿವಾಹವಾದರು. ಇವರಿಗೆ ಚರಿಷ್ಮಾ ಎಂಬ ಹೆಣ್ಣು ಮಗು ಇದ್ದಾಳೆ. ಸಪ್ನಾ ಐಟಿ ಕ್ಷೇತ್ರದಲ್ಲಿ ಉದ್ಯೋಗಿಯಾಗಿದ್ದಾರೆ. ಇದುವರೆಗೆ ಸಪ್ನಾ ಯಾವುದೇ ಸಿನಿಮಾ ಈವೆಂಟ್‌ಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದ್ದರಿಂದಲೇ ಈ ಪ್ರಕರಣ ಎಲ್ಲರಿಗೂ ಅಚ್ಚರಿಯಾಗಿದೆ. ಪ್ರಸ್ತುತ ದೂರು ಮಾತ್ರವೇ ದಾಖಲಾಗಿದ್ದು, ವಿಚ್ಛೇದನದ ಉದ್ದೇಶ ಇಲ್ಲ ಎಂದು ತಿಳಿದುಬಂದಿದೆ. ಆದಾಗ್ಯೂ, ಈ ಪ್ರಕರಣದ ಬೆಳವಣಿಗೆಗಳು ಹೇಗೆ ಸಾಗುತ್ತವೆ ಎನ್ನುವುದು ಕಾದು ನೋಡಬೇಕಿದೆ. ಅಭಿಮಾನಿಗಳು ಹಾಗೂ ಸಿನಿರಸಿಕರು ದಂಪತಿಯ ಕುಟುಂಬ ಜೀವನ ಸುಧಾರಿಸಲಿ ಎಂಬ ಆಶಯ ವ್ಯಕ್ತಪಡಿಸುತ್ತಿದ್ದಾರೆ.