Back to Top

ಬೆಟ್ಟಿಂಗ್ ಆ್ಯಪ್‌ಗಳ ವಿರುದ್ಧ ED ತನಿಖೆ: 29 ಸೆಲೆಬ್ರಿಟಿಗಳಿಗೆ ಕಾನೂನು ಚುಟುಕು, ವಿಜಯ್ ದೇವರಕೊಂಡ, ಪ್ರಕಾಶ್ ರಾಜ್ ಸೇರಿದಂತೆ ಹಲವು ಹೆಸರುಗಳು ತನಿಖೆ ಯಾದಿಯಲ್ಲಿ!

SSTV Profile Logo SStv July 10, 2025
ವಿಜಯ್ ದೇವರಕೊಂಡ, ಪ್ರಕಾಶ್ ರಾಜ್ ಗೆ ED ನೋಟಿಸ್!
ವಿಜಯ್ ದೇವರಕೊಂಡ, ಪ್ರಕಾಶ್ ರಾಜ್ ಗೆ ED ನೋಟಿಸ್!

ಬೆಟ್ಟಿಂಗ್ ಆ್ಯಪ್‌ಗಳ ಪ್ರಚಾರದಲ್ಲಿ ಭಾಗಿಯಾದ ಆರೋಪದ ಮೇಲೆ Enforcement Directorate (ED) ಮತ್ತು ಮಿಯಾಪುರ್ ಪೊಲೀಸರು ಒಂದಾಗಿ ಬೃಹತ್ ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಬಾಲಿವುಡ್ ಹಾಗೂ ದಕ್ಷಿಣ ಭಾರತದ 29 ಮಂದಿ ಸೆಲೆಬ್ರಿಟಿಗಳು ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಆರೋಪಿತರ ಪಟ್ಟಿಯಲ್ಲಿ ಸೇರಿದ್ದಾರೆ. ಈ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಅವರ ಪ್ರೇಮಿ ಹಾಗೂ ನಟ ವಿಜಯ್ ದೇವರಕೊಂಡ, ಹಿರಿಯ ನಟ ಪ್ರಕಾಶ್ ರಾಜ್, ನಟ ರಾಣಾ ದಗ್ಗುಬಾಟಿ, ನಟಿ ನಿಧಿ ಅಗರ್ವಾಲ್, ಶ್ರೀಮುಖಿ, ಮಂಚು ಲಕ್ಷ್ಮಿ, ಅನನ್ಯ ನಾಗಲ್ಲ ಸೇರಿದಂತೆ ಹಲವು ಪ್ರಮುಖರು ಸೇರಿದ್ದಾರೆ.

ಈ ಪ್ರಕರಣಕ್ಕೆ ಕಾರಣವಾದ ದೂರು ನೀಡಿದ್ದು ಮಿಯಾಪುರ್ ಮೂಲದ ಉದ್ಯಮಿ ಪಿ.ಎಂ. ಫಣೀಂದ್ರ ಶರ್ಮಾ. ಅವರು ನೀಡಿದ ದೂರಿನಂತೆ, ಈ ಸೆಲೆಬ್ರಿಟಿಗಳು ಮತ್ತು ಇನ್‌ಫ್ಲುಯೆನ್ಸರ್‌ಗಳು ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಸೇರಿದಂತೆ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಡಫಬೆಟ್, 1XBET, ಬೆಟ್‌ವೇ ಮೊದಲಾದ ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಆರ್ಥಿಕ ನಷ್ಟಕ್ಕೆ ಜನ ತುತ್ತಾಗಿದ್ದಾರೆ, ದೂರಿನಲ್ಲಿ, ಈ ಬೆಟ್ಟಿಂಗ್ ಆ್ಯಪ್‌ಗಳು ಮಧ್ಯಮ ಹಾಗೂ ಕೆಳಮಧ್ಯಮ ವರ್ಗದ ಜನರನ್ನು ಸುಲಭ ಹಣದ ಆಸೆ ತೋರಿಸಿ ಜೂಜಾಟದ ಚಟಕ್ಕೆ ಎಳೆಯುತ್ತಿವೆ. ಇದರ ಪರಿಣಾಮವಾಗಿ ಹಲವು ಕುಟುಂಬಗಳು ಆರ್ಥಿಕ ನಷ್ಟಕ್ಕೆ ತುತ್ತಾಗಿವೆ. ವಿಶಾಖಪಟ್ಟಣಂನ ವ್ಯಕ್ತಿಯೊಬ್ಬರು ಈ ಆ್ಯಪ್‌ಗಳಿಂದಾಗಿ ತಾವು ₹3.09 ಕೋಟಿ ನಷ್ಟ ಅನುಭವಿಸಿದ್ದಾಗಿ ದೂರು ನೀಡಿದ್ದಾರೆ.

ಈ ಆರೋಪದ ಮೇಲೆ ಭಾರತೀಯ ದಂಡ ಸಂಹಿತೆ, ತೆಲಂಗಾಣ ಗೇಮಿಂಗ್ ಕಾಯ್ದೆ ಹಾಗೂ ಐಟಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಡಿ ಹಾಗೂ ಪೊಲೀಸರು ಈಗಾಗಲೇ ಆರೋಪಿ ಸೆಲೆಬ್ರಿಟಿಗಳಿಗೆ ನೋಟಿಸ್‌ಗಳನ್ನು ಜಾರಿಗೊಳಿಸಿದ್ದಾರೆ. ವಿಜಯ್ ದೇವರಕೊಂಡ ಅವರ ತಂಡ ಈ ಕುರಿತು ಸ್ಪಷ್ಟನೆ ನೀಡಿದ್ದು, ಅವರು ಕೇವಲ ಕಾನೂನುಬದ್ಧವಾದ ಕೌಶಲ್ಯ ಆಧಾರಿತ ಗೇಮಿಂಗ್ ಪ್ಲಾಟ್‌ಫಾರ್ಮ್‌ (A23) ನ ಪ್ರಚಾರ ಮಾತ್ರ ಮಾಡಿದ್ದಾರೆ. ಅದು ಕೂಡ 2023ರಲ್ಲಿಯೇ ಕೊನೆಗೊಂಡಿದೆ ಎಂದು ಹೇಳಿದ್ದಾರೆ. ಇದೇ ರೀತಿಯಾಗಿ ಪ್ರಕಾಶ್ ರಾಜ್ ಅವರು 2016ರಲ್ಲಿ ನೀಡಿದ್ದ ಜಾಹೀರಾತನ್ನು 2017ರಲ್ಲಿ ರದ್ದುಗೊಳಿಸಿದ್ದಾಗಿ ಹೇಳಿದ್ದಾರೆ. ರಾಣಾ ದಗ್ಗುಬಾಟಿಯ ತಂಡವೂ ಕೂಡ ಕಾನೂನುಬದ್ಧ ಕಂಪನಿಯೊಂದಿಗಿನ ಒಪ್ಪಂದವನ್ನು ಮಾತ್ರ ಹೊಂದಿದ್ದೆವು ಎಂದು ಸ್ಪಷ್ಟಪಡಿಸಿದೆ.

ಈ ಪ್ರಕರಣವು ಬೆಟ್ಟಿಂಗ್ ಆ್ಯಪ್‌ಗಳ ಹಾನಿಕರ ಪ್ರಭಾವವನ್ನು ಬೆಳಕಿಗೆ ತಂದಿದ್ದು, ಇಂಥ ಅನಧಿಕೃತ ಆರ್ಥಿಕ ಚಟುವಟಿಕೆಗಳು ಸಮಾಜದಲ್ಲಿ ಎಷ್ಟು ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತವೆ ಎಂಬುದನ್ನು ತೋರಿಸುತ್ತದೆ. ಇಡಿ ಹಾಗೂ ಪೊಲೀಸರಿಂದ ಈ ಕುರಿತು ಗಂಭೀರ ತನಿಖೆ ಮುಂದುವರಿಯುತ್ತಿರುವುದು, ಇಂತಹ ಜಾಹೀರಾತುಗಳಿಂದ ಸಮಾಜದ ಮೇಲೆ ಬಡಿಸಲಾಗುವ ಪರಿಣಾಮಗಳ ಬಗ್ಗೆ ಗಂಭೀರ ಚಿಂತನೆಗೆ ದಾರಿ ಮಾಡಿಕೊಡುತ್ತದೆ.