Back to Top

ʻಜನ ಬೈದರು ಪರವಾಗಿಲ್ಲ, ನಮಗೆ ಮಕ್ಕಳು ಬೇಡʼ ಎಂದ ಸಂಗೀತಾ ಭಟ್;‌ ವೈಯಕ್ತಿಕ ಕಾರಣ ಹಂಚಿಕೊಂಡ ಸಂಗೀತಾ ಭಟ್

SSTV Profile Logo SStv September 13, 2025
ಮಕ್ಕಳ ನಿರ್ಧಾರ ಕುರಿತು ಕ್ಲಿಯರ್‌ ಸ್ಟೇಟ್‌ಮೆಂಟ್‌ ನೀಡಿದ ಸಂಗೀತಾ ಭಟ್-ಸುದರ್ಶನ್‌
ಮಕ್ಕಳ ನಿರ್ಧಾರ ಕುರಿತು ಕ್ಲಿಯರ್‌ ಸ್ಟೇಟ್‌ಮೆಂಟ್‌ ನೀಡಿದ ಸಂಗೀತಾ ಭಟ್-ಸುದರ್ಶನ್‌

ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ಗುರುತನ್ನು ಮಾಡಿಕೊಂಡಿರುವ ನಟಿ ಸಂಗೀತಾ ಭಟ್ ಮತ್ತು ಪತಿ ಸುದರ್ಶನ್‌ ರಂಗಪ್ರಸಾದ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ತೆರೆದ ಮನಸ್ಸಿನಿಂದ ಮಾತನಾಡಿದ್ದಾರೆ. ಇತ್ತೀಚೆಗೆ ನಡೆದ ʻಕಮಲ್‌ ಶ್ರೀದೇವಿʼ ಚಿತ್ರದ ಟ್ರೈಲರ್‌ ಲಾಂಚ್‌ ಕಾರ್ಯಕ್ರಮದಲ್ಲಿ ಈ ದಂಪತಿ ಮಾಧ್ಯಮಗಳ ಮುಂದೆ ತಮ್ಮ ನಿರ್ಧಾರ ಹಂಚಿಕೊಂಡರು.

ಸಂಗೀತಾ ಭಟ್ ಹಾಗೂ ಸುದರ್ಶನ್‌ ಅವರು ಮಕ್ಕಳನ್ನ ಹೊಂದದಿರಲು ನಿರ್ಧರಿಸಿದ್ದು, ಅದರ ಹಿಂದಿನ ಕಾರಣವನ್ನೂ ಬಹಿರಂಗಪಡಿಸಿದ್ದಾರೆ. “ಮಕ್ಕಳನ್ನು ಪಡೆಯುವುದು ದೊಡ್ಡ ಜವಾಬ್ದಾರಿ. ನಮಗೆ ಆ ಜವಾಬ್ದಾರಿ ಬೇಕೆನ್ನಿಸುವುದಿಲ್ಲ. ಜನ ಏನು ಬೇಕಾದರೂ ಹೇಳಲಿ, ಬೈಯಲಿ, ಆದರೆ ಇದು ನಮ್ಮ ನಿರ್ಧಾರ” ಎಂದು ಸಂಗೀತಾ ಭಟ್ ಸ್ಪಷ್ಟವಾಗಿ ಹೇಳಿದ್ದಾರೆ.

“ನಮ್ಮ ಜೀವನದಲ್ಲಿ ನಡೆದಿರುವ ಕೆಲವು ಘಟನೆಗಳಿಂದ ನಾವು ಇನ್ನೊಂದು ಜೀವವನ್ನು ಈ ಯೂನಿವರ್ಸ್‌ಗೆ ತರುವಂತಿಲ್ಲ ಅನ್ನಿಸಿದ್ದೆ. ಅದೂ ಒಂದು ಕಾರಣ. ನಾವು ನಮ್ಮದೇ ಆದ ರೀತಿಯಲ್ಲಿ ಬದುಕಬೇಕು ಎಂದುಕೊಂಡಿದ್ದೇವೆ” ಎಂದು ನಟಿ ಹೇಳಿದ್ದಾರೆ.

ಮತ್ತೊಂದು ಪ್ರಮುಖ ಕಾರಣವನ್ನು ಈ ಜೋಡಿ ಹಂಚಿಕೊಂಡಿದ್ದಾರೆ. “ಈ ಕಾಲದಲ್ಲಿ ಮಗುವನ್ನು ಬೆಳೆಸೋದು ಅಷ್ಟು ಸುಲಭದ ವಿಷಯವೇ ಅಲ್ಲ. ಅದು ತುಂಬಾ ಎಕ್ಸ್‌ಪೆನ್ಸಿವ್‌. ಮಗುವಿಗೆ ಉತ್ತಮ ಜೀವನ ಕೊಡಬೇಕೆಂದರೆ ನಮ್ಮ ಜೀವನದ ಹಲವಾರು ಸೌಲಭ್ಯಗಳನ್ನು ತ್ಯಾಗ ಮಾಡಬೇಕು. ಆ ರೋಲರ್‌ ಕೋಸ್ಟರ್‌ ರೈಡ್‌ ನಮಗೆ ಬೇಡ. ಬದಲಾಗಿ ನಾವು ಪ್ರಯಾಣ ಮಾಡಬೇಕು, ಒಳ್ಳೆಯ ಸಿನಿಮಾಗಳಲ್ಲಿ ನಟಿಸಬೇಕು, ಹೊಸ ಪಾತ್ರಗಳನ್ನು ಸ್ವೀಕರಿಸಬೇಕು ಅದೇ ನಮ್ಮ ಇಚ್ಛೆ” ಎಂದು ಸಂಗೀತಾ ಭಟ್ ಹೇಳಿದ್ದಾರೆ.

ಸಮಾಜದ ಮಾತುಗಳ ಬಗ್ಗೆ ಅವರು ಚಿಂತಿಸುವುದಿಲ್ಲ. “ಜನ ನಮ್ಮನ್ನು ಬೈದರೂ ಪರವಾಗಿಲ್ಲ. ಐದು ಬೆರಳು ಸಮವಲ್ಲ. ಎಲ್ಲರ ಚಿಂತನೆಗಳು ಬೇರೆ. ನಮ್ಮ ಚಾಯ್ಸ್‌ ಇದು. ನಾವು ಮಕ್ಕಳನ್ನು ಮಾಡಿಕೊಳ್ಳಲ್ಲ” ಎಂದು ಸಂಗೀತಾ ಹಾಗೂ ಸುದರ್ಶನ್‌ ಸ್ಪಷ್ಟವಾಗಿ ಹೇಳಿದ್ದಾರೆ. ಸಂಗೀತಾ ಭಟ್ ಮತ್ತು ಸುದರ್ಶನ್‌ ರಂಗಪ್ರಸಾದ್ ಅವರ ಈ ನಿರ್ಧಾರ ಹಲವು ಚರ್ಚೆಗಳಿಗೆ ಕಾರಣವಾದರೂ, ತಮ್ಮ ಜೀವನದ ಬಗ್ಗೆ ತಾವೇ ತೀರ್ಮಾನ ಮಾಡಿಕೊಳ್ಳುವ ಹಕ್ಕು ಎಲ್ಲರಿಗೂ ಇದೆ ಎಂಬ ಸಂದೇಶವನ್ನೇ ಈ ದಂಪತಿ ನೀಡಿದ್ದಾರೆ.