Back to Top

'ಸು ಫ್ರಂ ಸೋ' ಭಾನುವಾರ ಭರ್ಜರಿ ಕಲೆಕ್ಷನ್: ಬುಕ್‌ಮೈಶೋನಲ್ಲಿ ಮಿಲಿಯನ್ ಮಾರ್ಕ್ ದಾಟಿದ ಮೊದಲ ಸಿನಿಮಾ!

SSTV Profile Logo SStv August 4, 2025
ಪ್ಯಾನ್ ಇಂಡಿಯಾ ದಾರಿಗೆ 'ಸು ಫ್ರಂ ಸೋ'
ಪ್ಯಾನ್ ಇಂಡಿಯಾ ದಾರಿಗೆ 'ಸು ಫ್ರಂ ಸೋ'

ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದ ‘ಸು ಫ್ರಂ ಸೋ’ ಸಿನಿಮಾ ಸದ್ಯ ಬಾಕ್ಸಾಫೀಸ್‌ನಲ್ಲಿ ಭರ್ಜರಿ ವಿಜಯದ ದಾರಿಗೆ ಸಾಗುತ್ತಿದೆ. ಪ್ರತಿ ದಿನವೂ ಈ ಚಿತ್ರದ ಓಟ ಜೋರಾಗುತ್ತಲೇ ಇದ್ದು, ಇದೀಗ ಭಾನುವಾರದ ಕಲೆಕ್ಷನ್‌ನಲ್ಲಿ ಹೊಸ ದಾಖಲೆ ಬರೆದಿದೆ. ಚಿತ್ರದ ಮೇಕರ್‌ಗಳ ಲಾಫ್ಟರ್ ಬುದ್ಧ ಫಿಲ್ಮ್ಸ್ ಪೇಜ್‌ನಲ್ಲಿ ಅವರೇ ಹೇಳಿಕೊಂಡಿರುವಂತೆ, ಬುಕ್‌ಮೈಶೋ ಆಪ್ ಮೂಲಕ 1.1 ಮಿಲಿಯನ್ ಟಿಕೆಟ್‌ಗಳು ಮಾರಾಟವಾಗಿವೆ. ಇದು ಕನ್ನಡ ಸಿನಿಮಾಗಳ ಇತ್ತೀಚಿನ ಇತಿಹಾಸದಲ್ಲೇ ಅತ್ಯುತ್ತಮ ಆನ್‌ಲೈನ್ ಟಿಕೆಟ್ ಸೇಲ್ ಎನ್ನಬಹುದು.

ಅನಧಿಕೃತ ಮಾಹಿತಿಯ ಪ್ರಕಾರ, ‘ಸು ಫ್ರಂ ಸೋ’ ಚಿತ್ರ ಭಾನುವಾರ ಒಂದೇ ದಿನ 6 ಕೋಟಿ ರೂ. ಕಲೆಕ್ಷನ್ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಈ ಚಿತ್ರದ ಒಟ್ಟು ಕಲೆಕ್ಷನ್ ಶನಿವಾರದವರೆಗೆ 29 ಕೋಟಿ ಎಳೆದಿದ್ದರೆ, ಭಾನುವಾರದ ನಂತರ ಇದು ಸುಮಾರು 35 ಕೋಟಿಗೆ ಹತ್ತಿರುವ ಸಾಧ್ಯತೆ ಇದೆ. ಆದರೆ ಈ ಕುರಿತು ಸಿನಿಮಾ ತಂಡ ಇನ್ನೂ ಅಧಿಕೃತ ಘೋಷಣೆ ನೀಡಿಲ್ಲ. ಕನ್ನಡದಲ್ಲಿ ಭರ್ಜರಿ ಯಶಸ್ಸು ಕಂಡಿರುವ ಈ ಸಿನಿಮಾ ಇದೀಗ ಹಂತಹಂತವಾಗಿ ಪರಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಿ, ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ತಂಡ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಹಂಚಿಕೊಂಡಿದೆ. ತೆಲುಗು ಭಾಷೆಯಲ್ಲಿ ಈ ಸಿನಿಮಾ ಆಗಸ್ಟ್ 8ರಂದು ಬಿಡುಗಡೆಯಾಗಲಿದೆ. ತಮಿಳು ಮತ್ತು ಇತರ ಭಾಷೆಗಳ ಬಗ್ಗೆ ಮಾಹಿತಿ ಇನ್ನಷ್ಟೇ ನಿರೀಕ್ಷೆಯಲ್ಲಿದೆ.

‘ಸು ಫ್ರಂ ಸೋ’ ಚಿತ್ರ ಕನ್ನಡದಲ್ಲೇ ಆರಂಭವಾಗಿ ನಂತರ ಪ್ಯಾನ್ ಇಂಡಿಯಾ ಮಟ್ಟಕ್ಕೆ ಹಾದಿ ಹಿಡಿದ ‘ಕಾಂತಾರ’ ಚಿತ್ರವನ್ನು ನೆನಪಿಸುತ್ತದೆ. ಅಲ್ಲಿಯಂತೆಯೇ ಇದು ಈಗ ಕನ್ನಡದ ಗಡಿ ದಾಟಿ ದೇಶದ ವಿವಿಧ ಭಾಷೆಗಳ ಪ್ರೇಕ್ಷಕರ ಹೃದಯವನ್ನೂ ಗೆಲ್ಲುತ್ತಿದೆ.

‘ಸು ಫ್ರಂ ಸೋ’ ಚಿತ್ರ ಯಾವುದೇ ಸ್ಟಾರ್ ಪ್ರಚಾರವಿಲ್ಲದೇ ಕೇವಲ ಕಥಾ ಹಂದರ ಮತ್ತು ಕಲಾತ್ಮಕತೆಯ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಿರುವುದು ಖುಷಿಯ ಸಂಗತಿ. ಮುಂದಿನ ದಿನಗಳಲ್ಲಿ ಈ ಸಿನಿಮಾ ಇನ್ನಷ್ಟು ಭರ್ಜರಿ ದಾಖಲೆಗಳನ್ನು ಸ್ಥಾಪಿಸಲಿದೆ ಎಂಬುದು ನಿಶ್ಚಿತ.