‘ಕಾಂತಾರ ಚಾಪ್ಟರ್ 1’ ಚಿತ್ರತಂಡದ ಬಸ್ ಪಲ್ಟಿ 6 ಮಂದಿಗೆ ಗಂಭೀರ ಗಾಯ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಶೂಟಿಂಗ್ ವೇಳೆ ದುಃಖದ ಘಟನೆ ನಡೆದಿದೆ. ಚಿತ್ರತಂಡದ ಮಿನಿ ಬಸ್ ಕೊಲ್ಲೂರು ಸಮೀಪದ ಜಡ್ಕಳ್ ಬಳಿ ಪಲ್ಟಿ ಆಗಿದ್ದು, 6 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. 20ಕ್ಕೂ ಹೆಚ್ಚು ಕಲಾವಿದರು ಈ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದು, ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿತ್ರತಂಡ ಕರಾವಳಿ ಭಾಗದ ಹಲವು ಸ್ಥಳಗಳಲ್ಲಿ ಚಿತ್ರೀಕರಣ ನಡೆಸುತ್ತಿದೆ. ಮುದೂರುನಲ್ಲಿ ಶೂಟಿಂಗ್ ಮುಗಿಸಿ ಕೊಲ್ಲೂರಿಗೆ ತೆರಳುವ ವೇಳೆ ಈ ಅಪಘಾತ ಸಂಭವಿಸಿದೆ. ಬಸ್ ಪಲ್ಟಿಯಾಗಿದ್ದರಿಂದ ಚಿತ್ರತಂಡದ ಸದಸ್ಯರಲ್ಲಿ ತೀವ್ರ ಬೇಸರ ಮೂಡಿಸಿದೆ. ಗಾಯಾಳುಗಳ ಆರೋಗ್ಯದ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.
‘ಹೊಂಬಾಳೆ ಫಿಲ್ಮ್ಸ್’ ಮೂಲಕ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ‘ಕಾಂತಾರ’ ಚಿತ್ರದ ಪ್ರೀಕ್ವೆಲ್ ಆಗಿ ಈ ಸಿನಿಮಾ ರಿಲೀಸ್ ಆಗಲಿದೆ. 2025ರ ಅಕ್ಟೋಬರ್ 2ರಂದು ಈ ಬಹುನಿರೀಕ್ಷಿತ ಸಿನಿಮಾ ಬಿಡುಗಡೆಯಾಗಲಿದ್ದು, ಚಿತ್ರಪಟದ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗಿದೆ.
‘ಕಾಂತಾರ’ ಚಿತ್ರದ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ಅವರ ಈ ಹೊಸ ಪ್ರಯತ್ನ ಸಾಕಷ್ಟು ಕುತೂಹಲ ಮೂಡಿಸಿದೆ. ಆದರೆ ಈ ಅಪಘಾತವು ಚಿತ್ರತಂಡಕ್ಕೆ ತಾತ್ಕಾಲಿಕ ಹೊಡೆತ ನೀಡಿದ್ದು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂಬುದು ಎಲ್ಲರ ಆಸೆ.