Back to Top

ಗೋಲ್ಡನ್ ಸ್ಟಾರ್ ಗಣೇಶ್ ಜನ್ಮದಿನ: ಈ ಬಾರಿ ಅಭಿಮಾನಿಗಳ ದರ್ಶನವಿಲ್ಲ, ಮನೆಗೆ ಬಾರದಂತೆ ವಿನಂತಿ!

SSTV Profile Logo SStv June 30, 2025
ಗೋಲ್ಡನ್ ಸ್ಟಾರ್ ಗಣೇಶ್ 47ನೇ ಜನ್ಮದಿನ
ಗೋಲ್ಡನ್ ಸ್ಟಾರ್ ಗಣೇಶ್ 47ನೇ ಜನ್ಮದಿನ

ನಟ ಗಣೇಶ್, ಕನ್ನಡ ಚಿತ್ರರಂಗದ 'ಗೋಲ್ಡನ್ ಸ್ಟಾರ್', ಈ ಜುಲೈ 2ರಂದು 47ನೇ ವಸಂತಕ್ಕೆ ಕಾಲಿಡಲಿದ್ದಾರೆ. ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಸಂಭ್ರಮದಿಂದ ಆಚರಿಸುವ ಗಣೇಶ್, ಈ ಬಾರಿ ಮಾತ್ರ ಹೊರಾಂಗಣ ಚಿತ್ರೀಕರಣದ ತೊಡಗಿಸಿಕೊಂಡಿರುವುದರಿಂದ ಅಭಿಮಾನಿಗಳನ್ನು ಭೇಟಿಯಾಗಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ. ‘ಪಿನಾಕ’ ಹಾಗೂ ‘ಯುವರ್ ಸಿಂಸಿಯರ್ಲಿ’ ಎಂಬ ಎರಡು ಹೊಸ ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿರುವ ಅವರು, ಈ ಕಾರಣದಿಂದಾಗಿ ತಮ್ಮ ನಿವಾಸದ ಬಳಿ ಯಾರೂ ಬರಬಾರದು ಎಂಬ ವಿನಂತಿಯೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಗಣೇಶ್ ಅಭಿಮಾನಿಗಳಿಗೆ ಬರೆದ ಪತ್ರದಲ್ಲಿ, “ಜುಲೈ 2 ನನ್ನ ಹುಟ್ಟುಹಬ್ಬ. ಇದನ್ನು ನಾನು ನಿಮ್ಮ ಪ್ರೀತಿಯೊಂದಿಗೆ ಸಂಭ್ರಮಿಸೋ ದಿನ. ಆದರೆ ಈ ಬಾರಿ ಚಿತ್ರೀಕರಣದ ಕಾರಣ ನಿಮ್ಮೆಲ್ಲರನ್ನು ನೇರವಾಗಿ ಭೇಟಿಯಾಗಲು ಸಾಧ್ಯವಿಲ್ಲ. ದಯವಿಟ್ಟು ಯಾರೂ ಮನೆಯ ಬಳಿ ಬಾರದೆ, ಬದಲಾಗಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ, ಅಲ್ಲಿ ಇದ್ದಲ್ಲಿಂದಲೇ ಆಶೀರ್ವದಿಸಿ,” ಎಂದು ಮನದಾಳದ ಸಂದೇಶವನ್ನು ನೀಡಿದ್ದಾರೆ.

ಇತ್ತೀಚೆಗೆ ಬೆಂಗಳೂರು ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಹಲವರು ಪ್ರಾಣ ಕಳೆದುಕೊಂಡ ಘಟನೆ ಗಮನದಲ್ಲಿರಿಸಿಕೊಂಡು, ಗಣೇಶ್ ಮುನ್ನೆಚ್ಚರಿಕೆಯಿಂದ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಅಭಿಮಾನಿಗಳ ಹಿತ ಚಿಂತನೆಯೇ ಪ್ರಥಮ ಆದ್ಯತೆ ಆಗಿರುವ ಈ ನಿರ್ಧಾರಕ್ಕೆ ಹಲವರು ಸಹಮತ ವ್ಯಕ್ತಪಡಿಸುತ್ತಿದ್ದಾರೆ. ಹುಟ್ಟುಹಬ್ಬವನ್ನು ಶಾಂತಿಯುತವಾಗಿ, ಸಮಾಜಮುಖಿಯಾಗಿ ಆಚರಿಸಲು ಕೇಳಿರುವ ಗಣೇಶ್‌ ಅಭಿಮಾನಿಗಳಿಂದ ಪಾಸಿಟಿವ್ ಪ್ರತಿಕ್ರಿಯೆಗಳು ಬರುತ್ತಿವೆ.