Back to Top

“ಭೂತಾಯಿಯ ಮಡಿಲು ಸೇರಿದ ಅಭಿನಯ ಸರಸ್ವತಿ ಬಿ. ಸರೋಜಾದೇವಿ: ಭಾವನಾತ್ಮಕ ಅಂತ್ಯಕ್ರಿಯೆಯಲ್ಲಿ ಕಲಾ ಸರಸ್ವತಿ ಸಿನಿಮಾ ಲೋಕ ವಿದಾಯ!”

SSTV Profile Logo SStv July 15, 2025
ಭೂತಾಯಿಯ ಮಡಿಲು ಸೇರಿದ ಅಭಿನಯ ಸರಸ್ವತಿ ಬಿ. ಸರೋಜಾದೇವಿ
ಭೂತಾಯಿಯ ಮಡಿಲು ಸೇರಿದ ಅಭಿನಯ ಸರಸ್ವತಿ ಬಿ. ಸರೋಜಾದೇವಿ

ಜುಲೈ 14 ರಂದು ಹಿರಿಯ ನಟಿ, ಕನ್ನಡ ಚಿತ್ರರಂಗದ ಮೇರುನಟಿ ಬಿ. ಸರೋಜಾದೇವಿ ಅವರು ವಿಧಿವಶರಾಗಿದ್ದಾರೆ. ನಟನೆ, ನಾಟ್ಯ, ನಗು, ಸಂಭಾಷಣೆ ಎಲ್ಲವನ್ನೂ ಪ್ರೇಕ್ಷಕರ ಹೃದಯದಲ್ಲಿ ನಿಲ್ಲದಂತೆ ಅಚ್ಚಳಿಯಾಗಿ ಬಿತ್ತಿದ ನಟಿ ಅವರು. ಕೇವಲ ನಟಿಯಾಗಿಯೇ ಅಲ್ಲ, ಅದೆಷ್ಟೋ ಯುವತಿಯರಿಗೆ ಸ್ಫೂರ್ತಿಯಾಗಿದ್ದ ಮಹಾನಟಿ.

ಚನ್ನಪಟ್ಟಣದ ದಶಾವರ ಗ್ರಾಮದಲ್ಲಿ ತಾಯಿಯ ಸಮಾಧಿ ಪಕ್ಕ, ಒಕ್ಕಲಿಗ ಸಂಪ್ರದಾಯದಂತೆ ಹೂತು ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಹೂವಿನ ಪಲ್ಲಕ್ಕಿ, ಗ್ರಾಮಸ್ಥರ ಶ್ರದ್ಧಾಂಜಲಿಯೊಂದಿಗೆ, “ಗೋವಿಂದ...ಗೋವಿಂದ...” ಎಂಬ ಜಪದ ನಡುವೆ ಸರೋಜಾದೇವಿ ಭೂತಾಯಿಯ ಮಡಿಲು ಸೇರಿದರು.

ಶಿವರಾಜಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಜಗ್ಗೇಶ್, ಉಪೇಂದ್ರ, ಶ್ರುತಿ, ತಾರಾ, ಮಾಲಾಶ್ರೀ ಸೇರಿ ಅನೇಕ ಕಲಾವಿದರು ಅಂತಿಮ ದರ್ಶನ ಪಡೆದರು. ಡಾ. ರಾಜ್‌ಕುಮಾರ್ ಅವರೊಂದಿಗೆ ಅವರ ಜೋಡಿ ಸ್ಮರಣೀಯವಾಗಿದ್ದು, ಕಲ್ಯಾಣ್‌ಕುಮಾರ್, ಉದಯಕುಮಾರ್, ಹಾಗು ದಕ್ಷಿಣ ಭಾರತದ ಅನೇಕ ಹಿರಿಯ ನಟರೊಂದಿಗೆ ಅವರು ಚಿತ್ರರಂಗದಲ್ಲಿ ಮಿಂಚಿದರು.

1955ರ "ಮಹಾಕವಿ ಕಾಳಿದಾಸ" ಚಿತ್ರದಿಂದ ಸಿನಿ ಪ್ರವೇಶ ಮಾಡಿದ ಸರೋಜಾದೇವಿ, ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಅಸಂಖ್ಯಾತ ಚಿತ್ರಗಳಲ್ಲಿ ಅಭಿನಯಿಸಿ, ಭಾರತೀಯ ಚಿತ್ರರಂಗದ ಅಗ್ರತಾರೆಯಾಗಿದ್ದರು. 2019ರಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯದ “ನಟ ಸಾರ್ವಭೌಮ” ಚಿತ್ರದಲ್ಲಿ ಕೊನೆಯದಾಗಿ ನಟಿಸಿದ್ದರು. ಅಭಿನಯ ಸರಸ್ವತಿ ಎಂದೇ ಖ್ಯಾತಿ ಪಡೆದ ಬಿ. ಸರೋಜಾದೇವಿಯವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ, ಅವರ ಕಲಾತ್ಮಕ ಪಾತಿರಿಗಳು ನಮ್ಮ ಜೊತೆ ಸದಾ ಇರುತ್ತವೆ.