ಯಶ್ ತಾಯಿ ಪುಷ್ಪ ನಿರ್ಮಾಣ ಸಂಸ್ಥೆ ಮಾನಹಾನಿ? – ‘ಕೊತ್ತಲವಾಡಿ’ ವಿವಾದ ಕೋರ್ಟ್ ಬಾಗಿಲಿಗೆ?


ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಬಾರಿ ಸಂಭಾವನೆ ಹಾಗೂ ನಿರ್ಮಾಣ ಸಂಬಂಧಿತ ವಿವಾದಗಳು ಎದ್ದು ಬರುತ್ತವೆ. ಇದೀಗ ‘ಕೊತ್ತಲವಾಡಿ’ ಸಿನಿಮಾವೂ ಅಂತಹ ಚರ್ಚೆಗೆ ಕಾರಣವಾಗಿದೆ. ಸಿನಿಮಾದ ಸಹನಟ ಮಹೇಶ್ ಗುರು ಹಾಗೂ ಸಹನಟಿ ಸ್ವರ್ಣ ನಿರ್ದೇಶಕ ಶ್ರೀರಾಜ್ ಮತ್ತು ನಿರ್ಮಾಪಕರ ವಿರುದ್ಧ ತಮ್ಮ ಪಾವತಿ ಪೂರ್ಣಗೊಳ್ಳದ ವಿಚಾರವಾಗಿ ಆರೋಪ ಮಾಡಿದ್ದರು.
ತಮಗೆ ಸಿನಿಮಾದಲ್ಲಿ ಅಭಿನಯಿಸಿದ ಸಂಭಾವನೆ ಸಂಪೂರ್ಣವಾಗಿ ನೀಡಲಾಗಿಲ್ಲವೆಂದು ಹೇಳಿಕೊಂಡು ಸ್ವರ್ಣ ಯೂಟ್ಯೂಬ್‌ನಲ್ಲಿ ವೀಡಿಯೋ ಮೂಲಕ ಧ್ವನಿ ಎತ್ತಿದ್ದರು. “ಸಿನಿಮಾದಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದೇನೆ. 48 ಸಾವಿರ ರೂಪಾಯಿ ಸಂಭಾವನೆಗೆ ಒಪ್ಪಿಕೊಂಡಿದ್ದರೂ, 35 ಸಾವಿರ ಮಾತ್ರ ಕೊಟ್ಟಿದ್ದಾರೆ. ಅದೂ ಸಾಕಷ್ಟು ಒತ್ತಡದ ನಂತರ ಬಂದಿದೆ” ಎಂದು ಅವರು ಹೇಳಿಕೊಂಡಿದ್ದರು.
ಈ ಆರೋಪಗಳನ್ನು ತಿರಸ್ಕರಿಸಿರುವ ನಿರ್ದೇಶಕ ಶ್ರೀರಾಜ್, ಇದೀಗ ಸಹನಟಿ ಸ್ವರ್ಣ ವಿರುದ್ಧ ದೂರು ದಾಖಲಿಸಿದ್ದಾರೆ. ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿರುವ ದೂರುದಲ್ಲಿ, “ಸ್ವರ್ಣ ಅವರ ಹೇಳಿಕೆಗಳು ವೈಯಕ್ತಿಕ ತೇಜೋವಧೆಗೆ ಕಾರಣವಾಗಿವೆ. ಜೊತೆಗೆ ಯಶ್ ತಾಯಿ ಪುಷ್ಪ ಅರುಣ್‌ಕುಮಾರ್ ಅವರ ನಿರ್ಮಾಣ ಸಂಸ್ಥೆಗೆ ಮಾನಹಾನಿ ಉಂಟಾಗಿದೆ” ಎಂದು ಆರೋಪಿಸಲಾಗಿದೆ.
ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಆರ್ (Non-Cognizable Report) ದಾಖಲಿಸಿಕೊಂಡಿದ್ದಾರೆ. ನಿರ್ದೇಶಕ ಶ್ರೀರಾಜ್ ತಮ್ಮ ದೂರಿನಲ್ಲಿ ಕಲಾವಿದರಿಗೆ ಈಗಾಗಲೇ ಪಾವತಿ ಮಾಡಿರುವ ದಾಖಲೆಗಳನ್ನು ಸಲ್ಲಿಸಿರುವುದಾಗಿ ಹೇಳಿದ್ದಾರೆ. ಆದರೆ ಯಾವುದೇ ಅಗ್ರಿಮೆಂಟ್ ಪ್ರಕಾರ ವಿಷಯ ಪರಿಹಾರವಾಗಿಲ್ಲ. ಹೀಗಾಗಿ, ಈ ಕಾನೂನು ಹೋರಾಟ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
ಸ್ವರ್ಣ ತಮ್ಮ ವೀಡಿಯೋದಲ್ಲಿ, “ನಾನು ಸಿಂಗಲ್ ಪೇರೆಂಟ್ ಮಗಳು. ಲಕ್ಷಾಂತರ ರೂಪಾಯಿ ಕೇಳಿದಂತಿಲ್ಲ. ಕೇವಲ ಒಪ್ಪಿಕೊಂಡಿದ್ದ ಸಂಭಾವನೆ ಪಾವತಿಸಬೇಕು ಎಂದು ಕೇಳಿದ್ದೇನೆ” “ಯಶ್ ತಾಯಿ ನಿರ್ಮಾಪಕಿ ಎಂಬ ಕಾರಣಕ್ಕೆ ಕೆಲವರು ಕಲಾವಿದರ ಮೇಲೆ ತಪ್ಪು ಆರೋಪ ಮಾಡುತ್ತಿದ್ದಾರೆ”. “ನಮ್ಮ ಚಿತ್ರಕ್ಕೆ ನ್ಯಾಯ ಸಿಗಬೇಕು ಎಂಬ ಉದ್ದೇಶದಿಂದಲೇ ಧ್ವನಿ ಎತ್ತಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಅವರು ನಿರ್ದೇಶಕರ ಕುಟುಂಬದವರನ್ನೂ ದೂರಿದ್ದಾರೆ. “ಅವರು ನನ್ನನ್ನು ಅನ್ಯಾಯ ಮಾಡಿದ್ದಾರೆ, ನನ್ನ ಬಳಿ ಸಾಕ್ಷಿ ಇಲ್ಲ ಎಂದುಕೊಳ್ಳಬಹುದು. ಆದರೆ ಕರ್ಮ ಅವರನ್ನು ಬಿಡುವುದಿಲ್ಲ” ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ. ‘ಕೊತ್ತಲವಾಡಿ’ ಸಿನಿಮಾ ಸುತ್ತಮುತ್ತ ನಡೆದಿರುವ ಈ ವಿವಾದ ಇನ್ನೂ ಮುಕ್ತಾಯವಾಗಿಲ್ಲ. ಒಂದು ಕಡೆ ಕಲಾವಿದರು ತಮ್ಮ ಪಾವತಿಗಾಗಿ ಹೋರಾಟ ಮಾಡುತ್ತಿದ್ದರೆ, ಮತ್ತೊಂದು ಕಡೆ ನಿರ್ದೇಶಕರು ಮಾನಹಾನಿ ಪ್ರಕರಣ ದಾಖಲಿಸುತ್ತಿದ್ದಾರೆ. ಈಗಾಗಲೇ ಎನ್‌ಸಿಆರ್ ದಾಖಲಾಗಿದೆ. ಮುಂದೆ ಈ ಕಾನೂನು ಹೋರಾಟ ಯಾವ ದಿಕ್ಕಿಗೆ ಸಾಗುತ್ತದೆ ಎಂಬುದನ್ನು ಕಾಲವೇ ಹೇಳಬೇಕು.
ಒಟ್ಟಿನಲ್ಲಿ, ‘ಕೊತ್ತಲವಾಡಿ’ ಸಿನಿಮಾ ತೆರೆಗೆ ಬರಬೇಕಾದ ಸಮಯದಲ್ಲಿ, ಅದಕ್ಕಿಂತ ಹೆಚ್ಚು ಸುದ್ದಿಯಲ್ಲಿರುವುದು ಚಿತ್ರತಂಡದ ಅಂತರಂಗದ ಕಲಹಗಳೇ!
Trending News
ಹೆಚ್ಚು ನೋಡಿ"ಯಾಕೆ ಪಾಕಿಸ್ತಾನಿ ಆರೋಪಿಗಳಿಗೆ ಸೌಕರ್ಯ, ದರ್ಶನ್ಗೆ ಮಾತ್ರ ಅನ್ಯಾಯ?" ಜೈಲಾಧಿಕಾರಿಗಳ ವಿರುದ್ಧ ಲಾಯರ್ ಸುನಿಲ್ ವಾದ

ಪಂಚಭಾಷಾ ತಾರೆ ಬಿ.ಸರೋಜಾದೇವಿಯವರ ಹೆಸರಿನಲ್ಲಿ ಹೊಸ ಪ್ರಶಸ್ತಿ – ಮಹಿಳಾ ಕಲಾವಿದರ ಕನಸು ನನಸಾಗುವ ದಾರಿ!
