Back to Top

ಒಂದೇ ದಿನ ವಿಷ್ಣು, ಉಪೇಂದ್ರ, ಶ್ರುತಿ ಹುಟ್ಟುಹಬ್ಬ – ಕನ್ನಡ ಚಿತ್ರರಂಗದ ಟ್ರಿಪಲ್ ಸೆಲೆಬ್ರೇಶನ್!

SSTV Profile Logo SStv September 18, 2025
ಒಂದೇ ದಿನ ವಿಷ್ಣು, ಉಪ್ಪಿ, ಶ್ರುತಿ ಜನ್ಮದಿನ
ಒಂದೇ ದಿನ ವಿಷ್ಣು, ಉಪ್ಪಿ, ಶ್ರುತಿ ಜನ್ಮದಿನ

ಕನ್ನಡ ಸಿನಿರಂಗದಲ್ಲಿ ಸೆಪ್ಟೆಂಬರ್ 18 ಒಂದು ವಿಶೇಷ ದಿನ. ಯಾಕೆಂದರೆ ಇದೇ ದಿನ ವಿಷ್ಣುವರ್ಧನ್, ಉಪೇಂದ್ರ ಹಾಗೂ ಶ್ರುತಿ ಎಂಬ ಮೂವರು ದಿಗ್ಗಜ ಕಲಾವಿದರ ಹುಟ್ಟುಹಬ್ಬ. ತಮ್ಮದೇ ಆದ ಶೈಲಿ, ಕಲೆಯ ನಿಷ್ಠೆ ಹಾಗೂ ವೈಶಿಷ್ಟ್ಯಪೂರ್ಣ ಕೊಡುಗೆಗಳಿಂದ ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದ ಗುರುತು ಬಿಟ್ಟಿರುವ ಇವರು, ಅಭಿಮಾನಿಗಳ ಹೃದಯದಲ್ಲಿ ಸದಾ ಜೀವಂತವಾಗಿದ್ದಾರೆ.

‘ನಾಗರಹಾವು’ ಸಿನಿಮಾ ಮೂಲಕ ಅಪಾರ ಜನಪ್ರಿಯತೆ ಪಡೆದ ವಿಷ್ಣುವರ್ಧನ್, ಕನ್ನಡ ಚಿತ್ರರಂಗದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. 1950ರಲ್ಲಿ ಜನಿಸಿದ ವಿಷ್ಣು, ಇಂದು ಬದುಕಿದ್ದರೆ ತಮ್ಮ 75ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು.
ಈ ಬಾರಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ದೊರೆತಿದ್ದು, ಅಭಿಮಾನಿಗಳಿಗೆ ಹೆಮ್ಮೆ ಹಾಗೂ ಸಂತೋಷ ತಂದಿದೆ. ಆದರೆ, ಅಭಿನವ ಸ್ಟುಡಿಯೋ ಸಮಾಧಿ ಸ್ಥಳಕ್ಕೆ ಭೇಟಿ ನೀಡಲು ಅವಕಾಶ ಇಲ್ಲದಿರುವುದು ವಿಷಾದಕರ. ಕೆಂಗೇರಿ ಬಳಿ ಅವರ ಹೊಸ ಸ್ಮಾರಕದ ನಿರ್ಮಾಣಕ್ಕೆ ಯೋಜನೆಗಳು ಸಿದ್ಧವಾಗುತ್ತಿವೆ ಎಂಬುದು ಅಭಿಮಾನಿಗಳಿಗೆ ನೆಮ್ಮದಿ.

57ನೇ ವಯಸ್ಸಿಗೆ ಕಾಲಿಟ್ಟ ಉಪೇಂದ್ರ, ಕನ್ನಡ ಸಿನಿರಂಗದಲ್ಲಿ ಕ್ರಾಂತಿ ಮಾಡಿದ ನಿರ್ದೇಶಕ-ನಟ. ‘ಶ್’, ‘ಎ’, ‘ಉಪೇಂದ್ರ’, ‘ತರ್ಲೆ ನನ್ಮಗ’ ಮೊದಲಾದ ಸಿನಿಮಾಗಳು ಹೊಸ ಆಲೋಚನೆಗೆ ದಾರಿ ಮಾಡಿಕೊಟ್ಟವು. ಕಥಾನಕ, ಪಾತ್ರ ಚಿತ್ರಣ ಹಾಗೂ ಧೈರ್ಯದ ನಿರ್ದೇಶನ ಶೈಲಿಯಿಂದ ಅವರು ಸದಾ ವಿಭಿನ್ನರಾಗಿದ್ದಾರೆ. ಈ ಹುಟ್ಟುಹಬ್ಬದಂದು ಅವರ ಅಭಿಮಾನಿಗಳು ಅದ್ದೂರಿ ಸಂಭ್ರಮ ಪಡುತ್ತಿದ್ದಾರೆ. ಜೊತೆಗೆ ಹೊಸ ಸಿನಿಮಾಗಳ ಘೋಷಣೆ ಅವರ ಫ್ಯಾನ್ಸ್‌ಗೆ ಡಬಲ್ ಗಿಫ್ಟ್ ಆಗಿದೆ.

50ನೇ ವಯಸ್ಸಿಗೆ ಕಾಲಿಟ್ಟ ಶ್ರುತಿ, 1990ರಲ್ಲಿ ಬಿಡುಗಡೆಯಾದ ‘ನಂಬಿದ್ರೆ ನಂಬಿ ಬಿಟ್ರೆ ಬಿಡಿ’ ಚಿತ್ರದ ಮೂಲಕ ಬೆಳ್ಳಿತೆರೆಯ ಪ್ರವೇಶ ಪಡೆದರು. ಅದೇ ವರ್ಷ ಬಿಡುಗಡೆಯಾದ ‘ಶ್ರುತಿ’ ಚಿತ್ರದಲ್ಲಿ ಅವರ ಪಾತ್ರ ಹಿಟ್ ಆಗಿ, ಅದೇ ಹೆಸರು ಅವರಿಗೆ ನೆಂಟವಾಯಿತು.
ಆ ನಂತರ, ಅವರು ಅನೇಕರ ಹೃದಯ ಗೆದ್ದರು. ಇಂದಿಗೂ ಹಿರಿತೆರೆಯ ಜೊತೆಗೆ ಕಿರುತೆರೆಯಲ್ಲೂ ತಮ್ಮದೇ ಆದ ಸ್ಥಾನವನ್ನು ಹೊಂದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹಾರೈಸುವ ಸಂದೇಶಗಳಿಂದ ತುಂಬಿಹೋಗಿದೆ. ವಿಷ್ಣುವರ್ಧನ್‌ಗೆ ಗೌರವಪೂರ್ಣ ನೆನಪುಗಳು, ಉಪೇಂದ್ರಗೆ ಹೊಸ ಚಲನಚಿತ್ರ ನಿರೀಕ್ಷೆಗಳ ಶುಭಾಶಯಗಳು, ಶ್ರುತಿಗೆ ಅಭಿನಯದ ಮುಂದಿನ ಪಯಣಕ್ಕೆ ಶುಭ ಹಾರೈಕೆಗಳು .

ಒಂದೇ ದಿನ ಮೂವರು ದಿಗ್ಗಜರ ಹುಟ್ಟುಹಬ್ಬ ಬರೋದು ಕನ್ನಡ ಸಿನಿರಂಗಕ್ಕೆ ಅಪರೂಪದ ಸಂತೋಷದ ಕ್ಷಣ. ಇದು ಅಭಿಮಾನಿಗಳಿಗೆ ಮೂರು ಪಟ್ಟು ಸಂಭ್ರಮ, ಮೂರು ಪಟ್ಟು ಹೆಮ್ಮೆ ತಂದಿದೆ.